ಅತ್ಯಾಚಾರಕ್ಕೆ ಯತ್ನಿಸಿದ ಪುರುಷನ ಮರ್ಮಾಂಗ ಕತ್ತರಿಸಿದ ಮಹಿಳೆ: ಪ್ರಕರಣ ದಾಖಲು

ಸಿಧಿ(ಮಧ್ಯಪ್ರದೇಶ): ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಮನೆಯಲ್ಲಿದ್ದಾಗ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಮರ್ಮಾಂಗವನ್ನು 45ರ ವಯಸ್ಸಿನ ಮಹಿಳೆ ಕತ್ತರಿಸಿ ಹಾಕಿದ ಘಟನೆ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ.ದೂರದಲ್ಲಿರುವ ಉಮಾರಿಹಾ ಗ್ರಾಮದಲ್ಲಿ ಗುರುವಾರ ರಾತ್ರಿ 11ಕ್ಕೆ ಈ ಘಟನೆ ನಡೆದಿದೆ.
ಮಹಿಳೆ ದಾಖಲಿಸಿದ ದೂರಿನ ಪ್ರಕಾರ, ಆಕೆಯ ಪತಿ ಮನೆಯಿಂದ ಹೊರಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. 45ರ ವಯಸ್ಸಿನ ಆರೋಪಿ ಮನೆಯೊಳಗೆ ಪ್ರವೇಶಿಸಿದ್ದಾಗ ಮಹಿಳೆ ತನ್ನ 13ರ ವಯಸ್ಸಿನ ಮಗನೊಂದಿಗೆ ಇದ್ದರು. ಕಳ್ಳ ನುಸುಳಿಸಿದ್ದಾನೆಂದು ಭಾವಿಸಿ ಮಹಿಳೆಯ ಮಗ ಮನೆಯಿಂದ ಹೊರಗೆ ಓಡಿಹೋಗಿದ್ದನು. ಇದಾದ ನಂತರ ಆರೋಪಿಯು ಮಹಿಳೆಯನ್ನು ಥಳಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಮಹಿಳೆ ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ತನ್ನ ಹಾಸಿಗೆಯ ಕೆಳಗಿದ್ದ ಕುಡುಗೋಲು ಎತ್ತಿಕೊಂಡು ಪುರುಷನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ನಂತರ ಮಹಿಳಾ ಪೊಲೀಸ್ ಔಟ್ ಪೋಸ್ಟ್ ಗೆ ತೆರಳಿ ದೂರು ದಾಖಲಿಸಿದ್ದಾಳೆ. ಶುಕ್ರವಾರ ಬೆಳಗ್ಗೆ 1:30ರ ಸುಮಾರಿಗೆ ಆರೋಪಿಯ ವಿರುದ್ಧ ದೂರು ದಾಖಲಾಗಿದೆ ಎಂದು ಸಬ್ ಇನ್ಸ್ ಪೆಕ್ಟರ್ ಧರ್ಮೇಂದ್ರ ಸಿಂಗ್ ರಜಪೂತ್ ತಿಳಿಸಿದ್ದಾರೆ.
ಪೊಲೀಸರು ಪ್ರಥಮ ಚಿಕಿತ್ಸೆಗಾಗಿ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





