ಪಶ್ಚಿಮ ಬಂಗಾಳ, ಕೇಂದ್ರ ಸರಕಾರದ ಸಾಧನೆಯ ಬಗ್ಗೆ ಚರ್ಚೆಗೆ ಬನ್ನಿ: ಮೋದಿಗೆ ಅಭಿಷೇಕ್ ಸವಾಲು
ಸೋನಾರ್ ಬಾಂಗ್ಲಾ ನಿರ್ಮಿಸುವವರು ಚಿನ್ನದ ಭಾರತ ನಿರ್ಮಿಸಿಲ್ಲವೇಕೆ?

ಕೋಲ್ಕತಾ/ಹೊಸದಿಲ್ಲಿ: ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭ್ರಷ್ಟ ಪಕ್ಷ ಎಂದು ಆರೋಪಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತೃಣಮೂಲ ನಾಯಕ ಅಭಿಷೇಕ್ ಬ್ಯಾನರ್ಜಿ ಇಂದು ತಕ್ಕ ತಿರುಗೇಟು ನೀಡಿದ್ದಾರೆ.
ದೀದಿ(ಮಮತಾ ಬ್ಯಾನರ್ಜಿ)ಖೇಲೊ ಹೋಬ್ (ಆಟ ಶುರು)ಎಂದು ಹೇಳುತ್ತಿದ್ದಾರೆ. ನಾವು ವಿಕಾಸ್ ಹೋಬ್ (ಅಭಿವೃದ್ದಿ ಆಗುತ್ತದೆ) ಹೇಳುತ್ತೇವೆ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಹೇಳಿದ್ದಾರೆ. ಆದರೆ ಬಿಜೆಪಿಯವರ ಅಭಿವೃದ್ಧಿ ರೈತರುಗಳನ್ನು ಕೊಲ್ಲುವುದು. ಪಿಎಂ ಮೋದಿ 2014ರ ಚುನಾವಣೆಯಲ್ಲಿ 15 ಲಕ್ಷ ರೂ. ನೀಡುವ ಭರವಸೆ ನೀಡಿದ್ದರು. ಅದು ನಿಮಗೆ ಲಭಿಸಿದೆಯೇ? ಅದಕ್ಕವರು ಈಗ 5 ವರ್ಷ ಕಾಲಾವಕಾಶ ಕೇಳುತ್ತಿದ್ದಾರೆ. ಅವರು 5 ವರ್ಷ ಸಮಯ ಕೇಳಿದರೆ ಅವರು 500 ವರ್ಷಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಬ್ಯಾನರ್ಜಿ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಅವರು ಸೋನಾರ್ ಬಾಂಗ್ಲಾ(ಚಿನ್ನದ ರಾಜ್ಯ)ಭರವಸೆ ನೀಡಿದ್ದಾರೆ. ನಿಮಗೇಕೆ ಚಿನ್ನದ ಭಾರತ ನಿರ್ಮಿಸಲು ಸಾಧ್ಯವಾಗಿಲ್ಲ. ಸೋನಾರ್ ತ್ರಿಪುರಾವನ್ನು ನಿರ್ಮಿಸಿಲ್ಲವೇಕೆ? ಎಂದು ಬಿಜೆಪಿ ಆಡಳಿತದ ರಾಜ್ಯವನ್ನು ಬ್ಯಾನರ್ಜಿ ಉಲ್ಲೇಖಿಸಿದರು.
ಮಮತಾ ಬ್ಯಾನರ್ಜಿ 10 ವರ್ಷಗಳ ರಿಪೋರ್ಟ್ ಕಾರ್ಡ್ ನೀಡಿದ್ದಾರೆ. ಮೋದಿ ಜಿ ಅವರ ರಿಪೋರ್ಟ್ ಕಾರ್ಡ್ ಎಲ್ಲಿದೆ? ಎಂದು ತೃಣಮೂಲದ ಚುನಾವಣಾ ಪ್ರಣಾಳಿಕೆಯ ಬಗ್ಗೆ ಅಭಿಷೇಕ್ ಮಾತನಾಡಿದರು.
ಚರ್ಚೆಯೊಂದಕ್ಕೆ ನಾನು ನಿಮಗೆ ಸವಾಲು ಹಾಕುತ್ತೇನೆ. ಹತ್ತು ವರ್ಷಗಳಲ್ಲಿ ದೀದಿ ಏನು ಮಾಡಿದ್ದಾರೆ. ಏಳು ವರ್ಷಗಳಲ್ಲಿ ಮೋದಿ ಜಿ ಏನು ಮಾಡಿದ್ದಾರೆ ಎಂಬುದರ ಬಗ್ಗೆ ನಾವು ಹೋರಾಡುತ್ತೇವೆ. ನಾವು ನಿಮ್ಮನ್ನು 10 ಗೋಲುಗಳಿಂದ ಸೋಲಿಸುತ್ತೇವೆ. ನನ್ನ ವಯಸ್ಸು 33. ನಾನು ಹಿರಿಯರನ್ನು ಗೌರವಿಸುತ್ತೇನೆ. ನೀವು 2 ನಿಮಿಷಗಳ ಕಾಲ ಕಾಗದದ ನೆರವಿಲ್ಲದೆ ಬಂಗಾಳಿಯಲ್ಲಿ ಮಾತನಾಡಬೇಕು. ನಾನು ಎರಡು ಗಂಟೆಗಳ ಕಾಲ ಹಿಂದಿಯಲ್ಲಿ ಮಾತನಾಡುತ್ತೇನೆ. ಬಂಗಾಳಿಯಲ್ಲಿ ನೀವು ಕೇವಲ 120 ನಿಮಿಷ ಮಾತನಾಡಿ. ಈ ಸವಾಲನ್ನು ಸ್ವೀಕರಿಸಿ ಎಂದರು.
ನೀವೇ ಸ್ಥಳ ಹಾಗೂ ಸಮಯವನ್ನು ಆಯ್ಕೆ ಮಾಡಿ. ನಾನು ಉತ್ತರಪ್ರದೇಶ, ದಿಲ್ಲಿ..ನೀವು ಹೇಳಿದ ಸ್ಥಳಕ್ಕೆ ಬರುತ್ತೇನೆ. ನಾನು ಪೇಪರ್ ನ ಸಹಾಯವಿಲ್ಲದೆ ಒಂದು ಗಂಟೆ ಮಾತನಾಡುತ್ತೇನೆ. ನೀವು ಒಂದು ನಿಮಿಷ ಮಾತನಾಡಿ. ನಾನು ಅರ್ಧ ಗಂಟೆ ಮಾತನಾಡುತ್ತೇನೆ. ಈ ಸವಾಲನ್ನು ಸ್ವೀಕರಿಸಿ. ನೀವು ಏನು ಮಾಡಿದ್ದೀರಿ ಹಾಗೂ ನಾವು ಏನು ಮಾಡಿದ್ದೇವೆ ಎಂಬುದರ ಕುರಿತು ಮಾತನಾಡೋಣ ಬನ್ನಿ ಎಂದರು.
ಪಿಎಂ ಮೋದಿ 6 ಕೋಟಿ ಕಾರಿನಲ್ಲಿ ಓಡಾಡುತ್ತಾರೆ. ರೈತರಿಗೆ 6,000 ರೂ. ಘೋಷಿಸುತ್ತಾರೆ. ಮಮತಾ ಬ್ಯಾನರ್ಜಿ ಹವಾಯಿ ಚಪ್ಪಲಿನಲ್ಲಿ ಸಂಚರಿಸುತ್ತಾರೆ. ರೈತರಿಗೆ 10,000 ರೂ. ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಮೂಲಕ ಶೇ.4ರ ಬಡ್ಡಿಗೆ 10 ಲಕ್ಷ ರೂ. ಸಾಲ ಘೋಷಿಸಿದ್ದಾರೆ ಎಂದು ಬ್ಯಾನರ್ಜಿ ಹೇಳಿದ್ದಾರೆ.







