ಅಶ್ಲೀಲ ಸಿಡಿ ಪ್ರಕರಣ: ಉದ್ಯಮಿ ಮನೆ ಮೇಲೆ ಸಿಟ್ ದಾಳಿ

ಬೆಂಗಳೂರು, ಮಾ.20: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಟ್(ಎಸ್‍ಐಟಿ) ತನಿಖಾಧಿಕಾರಿಗಳು, ಶಂಕಿತ ಆರೋಪಿಗಳಿಗೆ ನೆರವು ನೀಡಿದ ಆರೋಪದಡಿ ಓರ್ವ ಉದ್ಯಮಿ ಮನೆ ಮೇಲೆ ದಿಢೀರ್ ದಾಳಿ ನಡೆಸಿದರು.
ಶನಿವಾರ ಇಲ್ಲಿನ ಜೆಪಿ ನಗರದ 7ನೆ ಹಂತದ ಕೊತ್ತನೂರು ದಿಣ್ಣೆಯಲ್ಲಿರುವ ಉದ್ಯಮಿ ಶಿವಕುಮಾರ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶೋಧಕಾರ್ಯ ಕೈಗೊಂಡರು.
ಉದ್ಯಮಿ ಶಿವಕುಮಾರ್ ಅವರು ಶಂಕಿತ ಆರೋಪಿ ಮಾಜಿ ಪತ್ರಕರ್ತ ನರೇಶ್‍ಗೌಡ ಜೊತೆಗೆ ಹಲವು ದಿನಗಳಿಂದ ನಿರಂತರ ಸಂಪರ್ಕ ಹೊಂದಿದ್ದರು. ಜತೆಗೆ, ಆತನೊಂದಿಗೆ ಹೆಚ್ಚಾಗಿ ಮೊಬೈಲ್ ಸಂಪರ್ಕ ಹೊಂದಿರುವ ಕಾರಣದಿಂದಾಗಿ ಸಿಟ್ ತನಿಖಾಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ದಾಳಿ ವೇಳೆ ಶಿವಕುಮಾರ್ ಇರಲಿಲ್ಲ. ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದ ಶಿವಕುಮಾರ್ ಕಣ್ಮರೆಯಾಗಿದ್ದಾರೆ. ಇನ್ನು, ಇವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಜಮೀನು ಅರ್ಜಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಲಕ್ಷ್ಮೀಪತಿ ಎಂಬಾತ ಸಿಟಿ ಸಿವಿಲ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೀಪತಿ ಮೇಲೆ ಇದುವರೆಗೆ ಎಫ್‍ಐಆರ್ ದಾಖಲಾಗಿಲ್ಲವಾದರೂ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಸಾಧ್ಯತೆ ಇದೆ. ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಲಕ್ಷ್ಮೀಪತಿ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ.
ಸಿಟ್‍ಗೆ ವರ್ಗಾವಣೆ: ಕಮಲ್ ಪಂತ್
ಯುವತಿಯ ತಂದೆ ನೀಡಿರುವ ಅಪಹರಣ ಪ್ರಕರಣವನ್ನು ಸಿಟ್‍ಗೆ ವರ್ಗಾವಣೆ ಮಾಡಲಾಗಿದ್ದು, ಎಲ್ಲವೂ ತನಿಖಾ ಹಂತದಲ್ಲಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಪ್ರಕರಣಗಳವೂ ನಮಗೆ ಮುಖ್ಯವಾಗಿದ್ದು, ಎಲ್ಲವನ್ನು ಭೇದಿಸುವುದು ಸವಾಲಿನ ಕೆಲಸವೇ ಆಗಿದೆ. ಹೀಗಾಗಿ, ಸಿಡಿ ಪ್ರಕರಣ ತನಿಖಾ ಹಂತದಲ್ಲಿದ್ದು, ಹೆಚ್ಚಿನ ಮಾಹಿತಿ ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು.







