ಬಿಎಎಸ್‌ಎಫ್ ಕಂಪೆನಿಯಲ್ಲಿ ರಾಸಾಯನಿಕ ದುರಂತದ ಅಣುಕು ಪ್ರದರ್ಶನ

ಮಂಗಳೂರು, ಮಾ.20: ನಗರದ ಹೊರವಲಯದ ಬಿಎಎಸ್‌ಎಫ್ ರಾಸಾಯನಿಕ ಕಾರ್ಖಾನೆಯಲ್ಲಿ ರಾಸಾಯನಿಕ ದುರಂತ ಸಂಭವಿಸಿದ್ದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ ಕುರಿತ ಅಣುಕು ಪ್ರದರ್ಶನವು ಶನಿವಾರ ನಡೆಯಿತು.
ಘಟಕದಲ್ಲಿ ತಾಪಮಾನ ಹೆಚ್ಚಾಗಿ ರಾಸಾಯನಿಕ ಸೋರಿಕೆ ಉಂಟಾಯಿತು. ಅಪಾಯದ ಸೂಚನೆಗಾಗಿ ಕಂಪೆನಿ ಆವರಣದಲ್ಲಿ ಅಳವಡಿಸಿದ್ದ ಸೈರನ್ ಮೊಳಗಿ, ಕಾರ್ಮಿಕರಿಗೆ ಎಚ್ಚರಿಕೆ ನೀಡಿತು. ತಕ್ಷಣವೇ ಹೊರಬಂದ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದ ದೃಶ್ಯ ಕಂಡುಬಂದಿತು.
ಘಟಕದಿಂದ ಕೊನೆಯದಾಗಿ ಹೊರಬಂದ ಕಾರ್ಮಿಕ ತೀವ್ರ ಅಸ್ವಸ್ಥನಾಗಿ ಬಿದ್ದಾಗ ವೈದ್ಯಕೀಯ ತಂಡವು ಅವರಿಗೆ ಆಕ್ಸಿಜನ್ ಮಾಸ್ಕ್ ಹಾಕಿ ತುರ್ತಾಗಿ ಆ್ಯಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಸಂಸ್ಥೆಯ ಅಧಿಕಾರಿಗಳು ಘಟನೆಯ ಬಗ್ಗೆ ಜಿಲ್ಲಾಡಳಿತಕ್ಕೆ ಸಂದೇಶ ನೀಡಿ ದರು. ತಕ್ಷಣವೇ ಜಿಲ್ಲಾಡಳಿತ ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಿ ಸಂಚರಿಸದಂತೆ ನೋಡಿಕೊಳ್ಳಲಾಯಿತು.
ಜಿಲ್ಲಾಡಳಿತದ ಮನವಿಯಂತೆ ಆಗಮಿಸಿದ ಎನ್‌ಡಿಆರ್‌ಎಫ್ ತಂಡವು, ರಾಸಾಯನಿಕ ಘಟಕದ ಕಂಟ್ರೋಲ್ ರೂಮ್‌ನ್ನು ಸಂಪರ್ಕಿಸಿ ಘಟಕದ ತಾಪಮಾನವನ್ನು ಕಾಲಕಾಲಕ್ಕೆ ಆನ್‌ಲೈನ್ ಮೂಲಕ ಪರಿಶೀಲಿಸಿ, ತಾಪಮಾನದ ಆಧಾರದ ಮೇಲೆ ಹಂತ ಹಂತವಾಗಿ ಕಾರ್ಯಾಚರಣೆ ನಡೆಸಲಾಯಿತು.
ಕಂಪೆನಿ ಆವರಣದಿಂದ ತೋಕೂರು ಗ್ರಾಮ ವ್ಯಾಪ್ತಿಯಲ್ಲಿರುವ ಪರಿಸರಕ್ಕೆ ರಾಸಾಯನಿಕ ಹರಡಿದ್ದು, ಅಲ್ಲಿ ತಕ್ಷಣವೇ ಎನ್‌ಡಿಆರ್‌ಎಫ್, ವೈದ್ಯಕೀಯ ಹಾಗೂ ಗೃಹರಕ್ಷಕರ ದಳದ ತಂಡವು ಗಂಭಿರವಾಗಿ ಅಸ್ವಸ್ಥರಾದ 25 ಜನರನ್ನು ಸ್ಟ್ರೆಚ್ಚರ್‌ನಲ್ಲಿ ಮಲಗಿಸಲಾಯಿತು. ಸಿಲಿಂಡರ್ ಒಳಗೊಂಡ ಉಸಿರಾಟದ ಉಪಕರಣವನ್ನು ಅಳವಡಿಸಿ, ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಉಳಿದ ಕೆಲವ ರನ್ನು ಹತ್ತಿರದ ಮಹಾಲಿಂಗೇಶ್ವರ ಶಾಲೆಗೆ ರವಾನಿಸಲಾಯಿತು.
ಸುತ್ತಮುತ್ತಲಿನ ಮನೆಗಳಿಗೆ ಭೇಟಿ ನೀಡಿ ರಾಸಾಯನಿಕ ಹರಡುವಿಕೆಯಿಂದ ಪರಿಣಾಮಗಳಾಗಿವೆ ಎಂಬ ಬಗ್ಗೆ ಎನ್‌ಡಿಆರ್‌ಎಫ್ ಹಾಗೂ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿದರು. ಚಿಕಿತ್ಸೆ ಅಗತ್ಯ ಇದ್ದವರನ್ನು ಸ್ಥಳದಲ್ಲಿಯೇ ಎನ್‌ಡಿಆರ್‌ಎಫ್ ತಂಡದಿಂದ ತುರ್ತು ಮೆಡಿಕಲ್ ಶಿಬಿರಕ್ಕೆ ಪ್ರಥಮ ಚಿಕಿತ್ಸೆ ನೀಡಲು ಕರೆದೊಯ್ಯಲಾಯಿತು. ಇದು ಶನಿವಾರ ಬಿಎಎಸ್‌ಎಫ್ ರಾಸಾಯನಿಕ ಕಾರ್ಖಾನೆಯಲ್ಲಿ ಆವರಣದಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಎನ್‌ಡಿಆರ್‌ಎಫ್ ತಂಡದಿಂದ ರಾಸಾಯನಿಕ ದುರಂತದ ಅಣುಕು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳು.
ಕಾರ್ಖಾನೆ ಮತ್ತು ಬಾಯ್ಲರ್‌ನ ಉಪನಿರ್ದೇಶಕ ರಾಜೇಶ್ ಮಿಶ್ರಿ ಕೋಟಿ ಮಾತನಾಡಿ, ರಾಸಾಯನಿಕ ದುರಂತದ ಸಂಭವಿಸಿದಾಗ ಸುತ್ತಮುತ್ತ ಲಿನ ಪರಿಸರದಲ್ಲಿ ಆಗುವ ಅಪಾಯವನ್ನು ಸಾರ್ವಜನಿಕರಿಗೆ ರಕ್ಷಣೆಯ ಅರಿವು ಮೂಡಿಸುವುದು ನಮ್ಮ ಕರ್ತವ್ಯ ಎಂದರು.
ಎನ್‌ಡಿಆರ್‌ಎಫ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್, ಬಿಎಎಸ್‌ಎಫ್, ಗೃಹರಕ್ಷಕ ದಳ, ಪೊಲೀಸ್, ಅಗ್ನಿಶಾಮಕ ಸೇರಿದಂತೆ 250ಕ್ಕೂ ಸಿಬ್ಬಂದಿ ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಅಣುಕು ಪ್ರದರ್ಶನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ವಿಜಯ್‌ಕುಮಾರ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್, ಗೃಹರಕ್ಷಕ ದಳದ ಡೆಪ್ಯೂಟಿ ಕಮಾಂಡೆಂಟ್ ರಮೇಶ್, ಬಿಎಎಸ್‌ಎಫ್ ಸಿಬ್ಬಂದಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







