ರಾಜ್ಯ ಸರಕಾರದ ನೀತಿಯಿಂದ ಸಂಕಷ್ಟಲ್ಲಿ ಪರ್ಸಿನ್ ಮೀನುಗಾರಿಕೆ: ಮೀನುಗಾರರ ಸಂಘ ಆರೋಪ
ಉಡುಪಿ, ಮಾ.20: ರಾಜ್ಯ ಸರಕಾರದ ಕಾನೂನಿನಿಂದ ಕಳೆದ 4 ವರ್ಷ ಗಳಿಂದ 140 ಪರ್ಸಿನ್ ಬೋಟ್‌ಗಳಿಗೆ ಮೀನುಗಾರಿಕೆ ಇಲ್ಲವಾಗಿದ್ದು, 5000ಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿವೆ ಎಂದು ಮಲ್ಪೆ ಪರ್ಸಿನ್ ಮೀನುಗಾರರ ಸಂಘ ಆರೋಪಿಸಿದೆ.
ಸಂಘದ ಕಚೇರಿಯಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಕೋಟ್ಯಾನ್, 140 ಬೋಟ್ ಗಳಲ್ಲಿ ಶೇ.10 ಬೋಟ್‌ಗಳಷ್ಟೇ ಮೀನುಗಾರಿಕೆ ಮಾಡುತ್ತಿವೆ. ಸಾಲ ಮಾಡಿ ಕಟ್ಟಿರುವ ನಮ್ಮ ಬೋಟ್ ಯಾವುದಕ್ಕೂ ಪ್ರಯೋಜನವಿಲ್ಲವಾಗಿದೆ. ಮಂಗಳೂರು, ಕಾರವಾರ, ಗೋವಾದಲ್ಲೂ ಪರ್ಸಿನ್ ಮೀನುಗಾರಿಕೆಗೆ ಅವಕಾಶವಿದೆ. ಆದರೆ ಸರ್ವಋತು ಮೀನುಗಾರಿಕಾ ಬಂದರು ಮಲ್ಪೆಯಲ್ಲಿ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಸಂಘದ ಉಪಾಧ್ಯಕ್ಷ ಚಂದ್ರ ಸಾಲ್ಯಾನ್ ಮಾತನಾಡಿ, ಎಸಿ ಕೊಠಡಿಯಲ್ಲಿ ಕುಳಿತು ಮೀನುಗಾರಿಕಾ ನೀತಿ ಮಾಡುತ್ತಿದ್ದಾರೆ. ನೈಜ ಮೀನುಗಾರರು ಯಾರು ಎಂಬುದು ಅವರಿಗೆ ಗೊತ್ತಿಲ್ಲ. ಹೆಚ್ಚಿನ ಅಧಿಕಾರಿಗಳಿಗೆ ಸಮುದ್ರದ ಮಾಹಿತಿಯೇ ಇರುವುದಿಲ್ಲ. ಬಂಡವಾಳ ಶಾಹಿಗಳಿಗೆ ಬೋಟ್ ಪರವಾನಿಗೆ ಕೊಟ್ಟು ಬೇಕಾಬಿಟ್ಟಿ ಅವಕಾಶ ಕೊಡುತ್ತಿದ್ದಾರೆ. ಡೀಸೆಲ್ ಬೆಲೆ ದಿನೇ ದಿನೇ ದುಬಾರಿಯಾಗುತ್ತಿರುವ ಪರಿಣಾಮ ಮೀನುಗಾರಿಕೆ ಕಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ಉಪಾಧ್ಯಕ್ಷ ಮಧುಕರ ಸುವರ್ಣ, ಕಾರ್ಯದರ್ಶಿ ಸಂತೋಷ್ ಸಾಲ್ಯಾನ್, ಜತೆ ಕಾರ್ಯದರ್ಶಿ ಜಯಶೀಳ ಅಮೀನ್, ಗೌರವಾಧ್ಯಕ್ಷ ಯಶೋಧರ ಅಮೀನ್, ಗೌರವ ಸಲಹೆಗಾರ ಗುರುದಾಸ್ ಬಂಗೇರಾ, ಪ್ರಮುಖರಾದ ರಾಮ ಸುವರ್ಣ, ರಾಜೇಶ್, ವಾಸುದೇವ ಕರ್ಕೇರ, ಗೋಪಾಲ ಅಮೀನ್, ಪದ್ಮನಾಭ ಕುಂದರ್, ಜಗದೀಶ್ ಸಾಲ್ಯಾನ್, ರಮೇಶ್ ಮೆಂಡನ್, ಗಂಗಾಧರ್ ಅಮೀನ್ ಉಪಸ್ಥಿತರಿದ್ದರು.
ಲೈಟ್ ಫಿಶಿಂಗ್‌ಗೆ ಅವಕಾಶಕ್ಕೆ ಆಗ್ರಹ
ಪರ್ಸಿನ್ ಮೀನುಗಾರರು ಸಾಂಪ್ರದಾಯಿಕವಾಗಿ ಮೀನುಗಾರಿಕೆ ಮಾಡುತ್ತಿದ್ದು, ಮೀನುಗಾರಿಕೆಗೆ ಯಾವುದೇ ಹಿನ್ನೆಡೆಯಾಗದಂತೆ ನೋಡಿ ಕೊಂಡಿದ್ದಾರೆ. ಪರ್ಸಿನ್ ಮೀನುಗಾರರು ಕೋಟ್ಯಾಂತರ ರೂ. ಹೂಡಿಕೆ ಮಾಡಿರುವುದರಿಂದ ಡಿಸೆಂಬರ್‌ನಿಂದ ಮೇ ಅಂತ್ಯದವರೆಗೆ ಲೈಟ್ ಫಿಶಿಂಗ್‌ಗೆ ಅವಕಾಶ ಕೊಡಬೇಕೆಂದು ಪರ್ಸಿನ್ ಮೀನುಗಾರರ ಸಂಘ ಆಗ್ರಹಿಸಿದೆ.
2008ರಲ್ಲಿ ಕೇಂದ್ರ ಸರಕಾರ ಅನ್ವೇಷಣೆ ನಡೆಸಿ ಲೈಟ್ ಫಿಶಿಂಗ್ ಮಾಡಬಹುದಿತ್ತು ಎಂದು ಹೇಳಿತ್ತು. ಆದರೆ ಆ ಕಾನೂನು 2016 ರಲ್ಲಿ ತಂದು ಬೆಳಕು ಮೀನುಗಾರಿಕೆ ಮಾಡಬಹುದೆಂದು ಆದೇಶ ಹೊರಡಿಸಿತ್ತು. ಈ ಆದೇಶದಂತೆ ಜನರೇಟರ್, ಕೆಲ ವಸ್ತುಗಳಿಗೆ ಕೋಟ್ಯಾಂತರ ರೂ. ಹೂಡಿಕೆ ಮಾಡಿದ್ದೇವೆ. ಆದರೆ ಏಕಾಏಕಿಯಾಗಿ ಆದೇಶವನ್ನು ಸ್ಥಗಿತ ಮಾಡುವುದು ಎಷ್ಟು ಸರಿ? ಗೋವಾದಲ್ಲಿ ಮೇ ವರೆಗೆ ಮೀನುಗಾರಿಕೆ ಆಗುತ್ತಿದೆ. ಎಂದು ನವೀನ್ ಕೋಟ್ಯಾನ್ ತಿಳಿಸಿದರು.







