ಮ್ಯಾನ್ಮಾರ್ ನಿರಾಶ್ರಿತರ ಬವಣೆಗಳಿಗೆ ಮಿಝೋರಾಮ್ ನಿರ್ಲಿಪ್ತವಾಗಿರಲು ಸಾಧ್ಯವಿಲ್ಲ:ಕೇಂದ್ರಕ್ಕೆ ಸಿಎಂ ಪತ್ರ

ಐಜ್ವಾಲ್,ಮಾ.20: ಮ್ಯಾನ್ಮಾರ್‌ನಿಂದ ಅಕ್ರಮ ವಲಸೆಯನ್ನು ತಡೆಯುವಂತೆ ಮತ್ತು ಗಡಿಪಾರು ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಮಿಝೋರಾಮ್ ಸೇರಿದಂತೆ ಆ ದೇಶದ ಗಡಿಗಳಿಗೆ ಹೊಂದಿಕೊಂಡಿರುವ ನಾಲ್ಕು ಈಶಾನ್ಯ ರಾಜ್ಯಗಳಿಗೆ ನೀಡಿರುವ ಆದೇಶವನ್ನು ಪುನರ್‌ಪರಿಶೀಲಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿರುವ ಮುಖ್ಯಮಂತ್ರಿ ರೆರಾಮ್‌ಥಂಗಾ ಅವರು,ಚಿನ್ ಸಮುದಾಯಗಳ ನಿರಾಶ್ರಿತರೊಂದಿಗೆ ಜನಾಂಗೀಯ ಬಾಂಧವ್ಯಗಳನ್ನು ಹೊಂದಿರುವ ತನ್ನ ರಾಜ್ಯದ ಜನರು ಅವರ ಬವಣೆಗಳಿಗೆ ನಿರ್ಲಿಪ್ತರಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಾ.18ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ,ಮಾನವೀಯ ನೆಲೆಯಲ್ಲಿ ರಾಜಕೀಯ ನಿರಾಶ್ರಿತರಿಗೆ ಆಶ್ರಯವನ್ನು ಒದಗಿಸುವ ವಿಷಯದಲ್ಲಿ ವೈಯಕ್ತಿಕ ಹಸ್ತಕ್ಷೇಪ ನಡೆಸುವಂತೆ ರೆರಾಮ್‌ಥಂಗಾ ಕೋರಿದ್ದಾರೆ.
‘ಗೃಹ ಸಚಿವಾಲಯವು ಮಾ.10ರಂದು ಮಿಝೋರಾಮ್, ನಾಗಾಲ್ಯಾಂಡ್,ಅರುಣಾಚಲ ಪ್ರದೇಶ ಮತ್ತು ಮಣಿಪುರಗಳಿಗೆ ಹೊರಡಿಸಿರುವ ನಿರ್ದೇಶವು ನಮ್ಮ ರಾಜ್ಯಕ್ಕೆ ಸ್ವೀಕಾರಾರ್ಹವಲ್ಲ. ಭಾರತವು ಎಚ್ಚರಿಕೆಯಿಂದ ಮುಂದೆ ಸಾಗಬೇಕಾದ ಕೆಲವು ವಿದೇಶಿ ನೀತಿ ವಿಷಯಗಳಿವೆ ಎನ್ನುವುದು ನನಗೆ ಗೊತ್ತು. ಆದರೆ ಈ ಮಾನವೀಯ ಬಿಕ್ಕಟ್ಟನ್ನು ನಾವು ಕಡೆಗಣಿಸಲಾಗದು ’ಎಂದು ಮಿರೆ ನ್ಯಾಷನಲ್ ಫ್ರಂಟ್(ಎಂಎನ್‌ಎಫ್)ನ ಅಧ್ಯಕ್ಷರೂ ಆಗಿರುವ ರೆರಾಮ್‌ಥಂಗಾ ಪತ್ರದಲ್ಲಿ ಹೇಳಿದ್ದಾರೆ.
ಎಂಎನ್‌ಎಫ್ ಬಿಜೆಪಿ ನೇತೃತ್ವದ ನಾರ್ಥ್ ಈಸ್ಟ್ ಡೆಮಾಕ್ರಟಿಕ್ ಅಲಯನ್ಸ್‌ನ ಭಾಗವಾಗಿದೆಯಾದರೂ ರಾಜ್ಯದಲ್ಲಿ ಅದು ಕೇಸರಿ ಪಕ್ಷದೊಡನೆ ಮೈತ್ರಿಯನ್ನು ಹೊಂದಿಲ್ಲ.
ತನ್ಮಧ್ಯೆ, ಮಿಝೋರಾಮ್ ನ ರಾಜ್ಯಸಭಾ ಸದಸ್ಯ ಕೆ.ವಾನ್ಲಾಲ್ವೆನಾ ಅವರು,ತನ್ನ ರಾಜ್ಯದಲ್ಲಿ ಆಶ್ರಯ ಪಡೆದುಕೊಂಡಿರುವ ಮ್ಯಾನ್ಮಾರ್ ನಿರಾಶ್ರಿತರ ಸಂಖ್ಯೆಯು ಒಂದು ಸಾವಿರವನ್ನು ದಾಟಿದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.







