ಏಶ್ಯನ್ ಅಮೆರಿಕನ್ನರ ವಿರುದ್ಧದ ಹಿಂಸೆ ಖಂಡಿಸಿದ ಬೈಡನ್
‘ದ್ವೇಷ, ಜನಾಂಗೀಯ ತಾರತಮ್ಯದಲ್ಲಿ ಅಮೆರಿಕ ಭಾಗಿಯಾಗಬಾರದು’

ಅಟ್ಲಾಂಟ (ಅಮೆರಿಕ), ಮಾ. 20: ಏಶ್ಯನ್ ಅಮೆರಿಕನ್ನರ ವಿರುದ್ಧ ಅಮೆರಿಕದಲ್ಲಿ ಹೆಚ್ಚುತ್ತಿರುವ ಹಿಂಸೆಯನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಖಂಡಿಸಿದ್ದಾರೆ. ಇದಕ್ಕೆ ದೇಶ ವಿರುದ್ಧವಾಗಿದೆ ಎಂಬುದಾಗಿ ಇತ್ತೀಚೆಗೆ ಅಟ್ಲಾಂಟ ನಗರದ ಮೂರು ಸ್ಪಾಗಳಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಸರಣಿ ಹತ್ಯಾಕಾಂಡಗಳಿಂದ ಆಘಾತಗೊಂಡಿರುವ ಸಮುದಾಯ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಜಾರ್ಜಿಯ ರಾಜ್ಯದ ಏಶ್ಯನ್-ಅಮೆರಿಕನ್ ಸಮುದಾಯದ ನಾಯಕರನ್ನು ಭೇಟಿಯಾದ ಬಳಿಕ, ಅಟ್ಲಾಂಟದ ಎಮರಿ ವಿಶ್ವವಿದ್ಯಾನಿಲಯದಲ್ಲಿ ಕಿರು ಭಾಷಣ ಮಾಡಿದ ಬೈಡನ್, ‘‘ದ್ವೇಷ ಮತ್ತು ಜನಾಂಗೀಯ ತಾರತಮ್ಯ ವಿಷವಾಗಿದ್ದು, ನಮ್ಮ ದೇಶವನ್ನು ತುಂಬಾ ಹಿಂದಿನಿಂದಲೂ ಕಾಡುತ್ತಿದೆ’’ ಎಂದು ಹೇಳಿದರು.
ಇಂಥ ದ್ವೇಷ ಮತ್ತು ಹಿಂಸೆಯನ್ನು ಅಮೆರಿಕದಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ‘ಮೌನವಾಗಿ’ ಸಹಿಸಿಕೊಳ್ಳಲಾಗುತ್ತಿತ್ತು ಎಂದು ಅವರು ಹೇಳಿದರು.
‘‘ಆದರೆ, ಅದು ಈಗ ಬದಲಾಗಬೇಕು, ಯಾಕೆಂದರೆ ನಮ್ಮ ಮೌನವು ನಾವು ಅದರಲ್ಲಿ ಶಾಮೀಲಾದಂತೆ. ನಾವು ಅದರಲ್ಲಿ ಶಾಮೀಲಾಗಬಾರದು’’ ಎಂದು ಬೈಡನ್ ನುಡಿದರು.
‘‘ನಾವು ಇದರ ವಿರುದ್ಧ ಮಾತನಾಡಬೇಕು ಹಾಗೂ ಕಾರ್ಯಪ್ರವೃತ್ತರಾಗಬೇಕು’’ ಎಂದರು.





