ಉಡುಪಿಯಲ್ಲಿ ಕೇಂದ್ರ ಸರ್ಕಾರದ ಉಡಾನ್ ಸ್ಕೀಂನಡಿ ಸೀಪ್ಲೇನ್

ಕಾಪು : ಮುಂದಿನ 10 ವರ್ಷಗಳಲ್ಲಿ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಸಕ್ತಿಯಿಂದ ದೂರದೃಷ್ಟಿತ್ವ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರದ ಉಡಾನ್ ಸ್ಕೀಂನಡಿ ಸೀಪ್ಲೇನ್ ಹಾಗೂ ಹೆಲಿ ಟೂರಿಸಂ ಯೋಜನೆಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ತಿಳಿಸಿದರು.
ಕಾಪು ತಾಲೂಕಿನ ಮೂಳೂರು ಸಾಯಿರಾಧ ಹೆರಿಟೇಜ್‍ನಲ್ಲಿ ಶನಿವಾರ ನಡೆದ ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಸಹಭಾಗಿತ್ವದಲ್ಲಿ ನಡೆದ ಪ್ರವಾಸೋದ್ಯಮ ಭಾಗಿದಾರರ ಸಭೆಯಲ್ಲಿ ಮಾತನಾಡಿದರು.
ಕರಾವಳಿ ಭಾಗದ ಸಮುದ್ರ ತೀರಗಳ ಅಭಿವೃದ್ಧಿ ಕುರಿತಂತೆ ಎರಡು ದಿನಗಳಲ್ಲಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಪ್ರವಾಸೋದ್ಯಮಕ್ಕೆ ಯಾವ ರೀತಿ ಉತ್ತೇಜನ ಕೊಡಬೇಕು ಎಂಬ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಉಡುಪಿ ಜಿಲ್ಲಾಧಿಕಾರಿ ಪ್ರವಾಸೋಧ್ಯಮಕ್ಕೆ ಸಂಬಂಧಿಸಿ ಯೋಜನೆಯನ್ನು ಸಿದ್ದಪಡಿಸುತ್ತಿದ್ದಾರೆ.
ಪ್ರವಾಸೋದ್ಯಮ ನಿರ್ದೇಶಕ ಕುಮಾರ್ ಪುಷ್ಕರ್ ಮಾತನಾಡಿ, ಉಡುಪಿ ಜಿಲ್ಲೆಯ ಸುಂದರವಾದ ಕಡಲತೀರ ಹೊಂದಿದ್ದು, ಶಿಕ್ಷಣ, ಕಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣವಿದೆ ಎಂದರು.
ಅಸೋಸಿಯೇಶನ್ ಆಫ್ ಕೋಸ್ಟಲ್ ಟೂರಿಸಂ ಅಧ್ಯಕ್ಷ ಮನೋಹರ ಶೆಟ್ಟಿ ಮಾತನಾಡಿ, ಪ್ರವಾಸೋದ್ಯಮ ವಿಶೇಷ ವಲಯ ರಚನೆ ಮಾಡ ಬೇಕು. ಸ್ಟಾರ್ ಹೋಟೆಲ್‍ಗಳ ನಿರ್ಮಾಣಕ್ಕೆ ಅನುಕೂಲಕರವಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ಭಾಗಿದಾರರ ತಂಡ ಉತ್ಸುಕವಾಗಿದೆ. ಹೋಂ ಸ್ಟೇ ಪರವಾನಿಗೆ ನಿಯಮ ಸರಳೀಕರಣ ಮಾಡಬೇಕು. ಇನ್ನಷ್ಟು ಬೀಚ್‍ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ ಬೀಚ್‍ಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವಂತೆ ಬೇಡಿಕೆ ಸಲ್ಲಿಸಿದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ ಬನವಾಸಿ, ಮಂಗಳೂರು ಪ್ರವಾಸೋದ್ಯಮ ಸಲಹೆಗಾರ ರತ್ನಾಕರ್, ಪ್ರವಾಸೋದ್ಯಮ ಭಾಗಿದಾರರಾದ ಶ್ರೀಧರ ಶೇಣವ, ನಾಗರಾಜ ಹೆಬ್ಬಾರ್, ಗಂಗಾಧರ ಸುವರ್ಣ, ವೈ. ಶಶಿಧರ ಶೆಟ್ಟಿ, ಸುಭಾಷಿತ್ ಕುಮಾರ್ ಮೊದಲಾದವರಿದ್ದರು.







