ಶೋಷಿತರಿಗೆ ಸೌಲಭ್ಯಗಳು ದೊರಕಿಸಿಕೊಡಲು ಸಂಘಟನೆಗಳು ಅಗತ್ಯ: ಸಿದ್ದರಾಮಯ್ಯ

ಬೆಂಗಳೂರು, ಮಾ. 20: ‘ಬಡವರು, ದಲಿತ, ಅಲೆಮಾರಿ-ಬುಡಕಟ್ಟು, ಆದಿವಾಸಿ ಮಕ್ಕಳು, ಮಹಿಳೆಯರು ಸೇರಿದಂತೆ ಶೋಷಿತ ಸಮುದಾಯದ ಧ್ವನಿಯಾಗಿ ಭೀಮಪುತ್ರಿ ಬ್ರಿಗೇಡ್ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ' ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ಮೌರ್ಯ ವೃತ್ತದಲ್ಲಿ ಅಕ್ಷರದ ಅವ್ವ ಸಾವಿತ್ರಿ ಬಾಯಿ ಫುಲೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದಲ್ಲಿ ದಲಿತ, ದಮನಿತರ ಪರವಾಗಿ ಕೆಲಸ ಮಾಡುವ ಸಂಘಟನೆಗಳು ಅತ್ಯಗತ್ಯ. ಹೋರಾಟದಿಂದಲೇ ಶೋಷಿತರಿಗೆ ಸೌಲಭ್ಯಗಳು ದೊರಕಿಸಿಕೊಡಲು ಸಾಧ್ಯ ಎಂದು ಪ್ರತಿಪಾದಿಸಿದರು.
ಭೀಮಪುತ್ರಿ ಬ್ರಿಗೇಡ್ ಸಂಘಟನೆ ಸಮಾಜದಲ್ಲಿನ ಕಟ್ಟಕಡೆಯ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಲಿ. ಅಲ್ಲದೆ, ಈ ಸಂಘಟನೆಯೊಂದಿಗೆ 180ಕ್ಕೂ ಹೆಚ್ಚು ಮೂಲ ನಿವಾಸಿ ಸಂಘಟನೆಗಳ ಒಕ್ಕೂಟವೂ ಇರುವುದು ಒಳ್ಳೆಯದು. ಈ ಸಂಘಟನೆಗೆ ಬೆಂಬಲವಾಗಿ ನಾನು ಇರುತ್ತೇನೆ ಎಂದು ಸಿದ್ದರಾಮಯ್ಯ ಇದೇ ವೇಳೆ ಅಭಯ ನೀಡಿದರು.
ಪ್ರಶಸ್ತಿ ಪ್ರದಾನ: ಆ ಬಳಿಕ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ‘ಅಂತರ್‍ರಾಷ್ಟ್ರೀಯ ಮಹಿಳಾ ದಿನ’ದ ಅಂಗವಾಗಿ ಸಂಘ-ಸಂಸ್ಥೆಗಳ 30 ಮಂದಿ ಸಾಧಕಿಯರಿಗೆ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯರೆಡ್ಡಿ, ಡಾ.ಬಿ.ಎಲ್.ಸುಜಾತ ರಾಥೋಡ್, ಡಾ.ಗೀತಾ ಶಿವಮೂರ್ತಿ, ಟಿ.ಕಾವ್ಯ, ಪ್ರೇಮಾ ರಾಮಪ್ಪ ನಡಬಟ್ಟಿ, ಆಶಾ, ಚಾಂದನಿ, ಹರ್ಷಿಯಾ ಭಾನು, ವಡ್ಡಗೆರೆ ಕದಿರಮ್ಮ, ವರಲಕ್ಷ್ಮಿ, ಶಶಿಕಲಾ, ರೇಣುಕಾ, ಟಿ.ಕೆ.ಶರೀಫಾ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂವತ್ತು ಮಂದಿಗೆ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮಾಜಿ ಸಚಿವ ದಿನೇಶ್ ಗುಂಡೂರಾವ್, ಮುಖಂಡರಾದ ಬಿ.ಗೋಪಾಲ್, ಡಾ.ಶಾಲಿನಿ ರಜನೀಶ್, ಡಿ.ರೂಪಾ, ಯೋಗೇಶ್ ಮಾಸ್ಟರ್, ವಡ್ಡಗೆರೆ ನಾಗರಾಜಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್, ಕೇಶವಮೂರ್ತಿ, ಲೋಕೇಶ್ ಚಂದ್ರ, ಎಸ್.ಆರ್.ರಾಜಾನಾಯ್ಕ್, ದಾಸ್ ಪ್ರಕಾಶ್, ಹೆಬ್ಬಾಳ ವೆಂಕಟೇಶ್, ಎ.ಜೆ.ಖಾನ್, ಗೋವಿಂದಸ್ವಾಮಿ, ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕಿ ರೇವತಿ ರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.







