ಮಾಜಿ ಪೊಲೀಸ್ ಆಯುಕ್ತರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವೆ: ಅನಿಲ್ ದೇಶ್ ಮುಖ್

ಮುಂಬೈ: ತನ್ನ ವಿರುದ್ಧ ಭ್ರಷ್ಟಾಚಾರ ಹಾಗೂ ಪೊಲೀಸರ ಕೆಲಸಕ್ಕೆ ಹಸ್ತಕ್ಷೇಪ ಮಾಡಿದ್ದೇನೆಂಬ ಆರೋಪ ಹೊರಿಸಿರುವ ಮಾಜಿ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ ಮುಖ್ ಶನಿವಾರ ಎಚ್ಚರಿಕೆ ನೀಡಿದ್ದಾರೆ.
"ಪರಮ್ ಬೀರ್ ಸಿಂಗ್ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ಅದನ್ನು ಅವರು ಸಾಬೀತುಪಡಿಸಬೇಕು. ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’’ ಎಂದು ಹೇಳಿಕೆಯೊಂದರಲ್ಲಿ ದೇಶ್ ಮುಖ್ ತಿಳಿಸಿದರು.
ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ ಸಿಂಗ್, ಸಚಿನ್ ವಾಝೆ ಸಹಿತ ಹಲವು ಪೊಲೀಸ್ ಅಧಿಕಾರಿಗಳಿಗೆ ರೆಸ್ಟೋರೆಂಟ್ ಗಳು, ಪಬ್ ಗಳು, ಬಾರ್ ಗಳು ಹಾಗೂ ಹುಕ್ಕಾ ಪಾರ್ಲರ್ ಗಳಿಂದ ಹಣ ಸಂಗ್ರಹಿಸುವಂತೆ ದೇಶ್ ಮುಖ್ ತಿಳಿಸಿದ್ದರು. ತಿಂಗಳಿಗೆ 100 ಕೋಟಿ ಹಣ ಸಂಗ್ರಹಿಸಲು ಅಧಿಕಾರಿಗಳಿಗೆ ಗುರಿ ನಿಗದಿಪಡಿಸಿದ್ದರು ಎಂದು ಆರೋಪಿಸಿದ್ದರು.
ಹಿರಿಯ ಪೊಲೀಸ್ ಅಧಿಕಾರಿ ಸಿಂಗ್ ಅವರನ್ನು ಗೃಹ ರಕ್ಷಕ ದಳಕ್ಕೆ ವರ್ಗಾಯಿಸಿದ ಕೆಲವು ದಿನಗಳ ಬಳಿಕ ಅವರು ಗಂಭೀರ ಆರೋಪ ಮಾಡಿದ್ದಾರೆ.







