ಕುಂಜಿಲ ಗ್ರಾಮದ ತೋಟದಲ್ಲಿ 2 ಹುಲಿಗಳು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
ಮಡಿಕೇರಿ, ಮಾ.20: ದಕ್ಷಿಣ ಕೊಡಗಿನ ಜನರ ನಿದ್ದೆಗೆಡಿಸಿದ್ದ ಹುಲಿಗಳು ಇದೀಗ ಕುಂಜಿಲ ಗ್ರಾಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಭೀತಿ ಮೂಡಿಸಿವೆ.
ಕುಂಜಿಲದ ಪತ್ತಂಗೂಡ್ ಮೂಸ ಎಂಬುವವರ ತೋಟದಲ್ಲಿ ಎರಡು ಹುಲಿಗಳು ಪ್ರತ್ಯಕ್ಷವಾಗಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಪುದರೆ ಅಬೂಬಕರ್ ಅವರು ಬೆಳಗ್ಗೆ ಸುಮಾರು 6.45 ಗಂಟೆಗೆ ಕೆಲಸಕ್ಕೆಂದು ತೋಟವನ್ನು ಪ್ರವೇಶಿಸಿದಾಗ ಎರಡು ಹುಲಿಗಳು ಇರುವುದನ್ನು ಕಂಡು ಭಯಭೀತರಾಗಿ ಓಡಿ ಬಂದಿದ್ದಾರೆ.
ಈ ಕುರಿತು ಪತ್ತಂಗೂಡ್ ಮೂಸ ಅವರು ಧ್ವನಿ ಮುದ್ರಣದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುತ್ತಮುತ್ತಲ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿ ಕುಂಜಿಲ, ಕೊಳಕೇರಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ 2 ಜಾನುವಾರುಗಳು ಹುಲಿ ದಾಳಿಗೆ ಬಲಿಯಾಗಿದ್ದವು.
ಮುಂದುವರಿದ ಪ್ರತಿಭಟನೆ
ಈ ನಡುವೆ ದಕ್ಷಿಣ ಕೊಡಗಿನ ಬೆಳ್ಳೂರು ಗ್ರಾಮದಲ್ಲಿ ಹುಲಿ ದಾಳಿ ನಿಯಂತ್ರಣಕ್ಕಾಗಿ ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆ ಮುಂದುವರಿದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಸೂಚಿಸಬೇಕೆಂದು ಹೋರಾಟದ ನೇತೃತ್ವ ವಹಿಸಿರುವ ರೈತ ಸಂಘ ಒತ್ತಾಯಿಸಿದೆ.







