ಆಸ್ಟ್ರೇಲಿಯದಲ್ಲಿ 50 ವರ್ಷಗಳಲ್ಲೇ ದಾಖಲೆ ಮಳೆ
ಸಿಡ್ನಿ ನಗರ ಸಹಿತ ಹಲವು ಪ್ರದೇಶಗಳು ಪ್ರವಾಹಪೀಡಿತ, ರಸ್ತೆ ಸಂಪರ್ಕ ಅಸ್ತವ್ಯಸ್ತ

ಪೋಟೊ ಕೃಪೆ: twitter.com
ಮೆಲ್ಬೋರ್ನ್,ಮಾ.21: ಆಸ್ಟ್ರೇಲಿಯದ ಪೂರ್ವ ಕರಾವಳಿಯಲ್ಲಿ ಕಳೆದ 50 ವರ್ಷಗಳಲ್ಲೇ ಗರಿಷ್ಠ ಮಳೆ ಸುರಿದಿದ್ದು, ಹಲವು ಪ್ರದೇಶಗಳು ನೆರೆನೀರಿನಲ್ಲಿ ಮುಳುಗಿವೆ.
ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ನೆರೆಪೀಡಿತ ಪ್ರದೇಶಗಳಿಂದ ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ ಹಾಗೂ ನೂರಾರು ಮನೆಗಳು ಹಾನಿಗೀಡಾಗಿವೆ.
ಆಸ್ಟ್ರೇಲಿಯದ 8 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ರಾಜ್ಯವಾದ ನ್ಯೂಸೌತ್ ವೇಲ್ಸ್ ಭೀಕರ ಪ್ರವಾಹದಿಂದ ತತ್ತರಿಸಿದೆ. ದೇಶದ ಪ್ರಮುಖ ನಗರಗಳಲ್ಲೊಂದಾದ ಸಿಡ್ನಿಯ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿರುವುದಾಗಿ ನ್ಯೂಸೌತ್ ವೇಲ್ಸ್ನ ಮುಖ್ಯಮಂತ್ರಿ ಗ್ಲಾಡಿಸ್ ಬೆರೆಜಿಕಿಲಾನ್ ತಿಳಿಸಿದ್ದಾರೆ.
ಸಿಡ್ನಿಯ ವಾಯವ್ಯಭಾಗದಲ್ಲಿ ನೆರೆ ಹಾವಳಿ ಉಲ್ಬಣಿಸಿದ್ದು, ಅಲ್ಲಿನ ಜನರು ಶನಿವಾರ ಮಧ್ಯರಾತ್ರಿಯಲ್ಲೇ ಮನೆಯನ್ನು ತೊರೆದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಆದೇಶಿಸಲಾಗಿದೆ.
ಭಾರೀ ವೇಗವಾಗಿ ನುಗ್ಗಿಬರುತ್ತಿರುವ ನೆರೆನೀರು ಹಲವಾರು ಮನೆಗಳು ಮತ್ತು ರಸ್ತೆಗಳನ್ನು ಮುಳುಗಿಸಿರುವ, ಮರಗಳನ್ನು ಬುಡಮೇಲುಗೊಳಿಸುವ ದೃಶ್ಯಗಳನ್ನು ಟಿವಿ ಹಾಗೂ ಸಾಮಾಜಿಕ ಜಾಲತಾಣಗಳು ಪ್ರಸಾರ ಮಾಡಿವೆ.
ನ್ಯೂಸೌತ್ ವೇಲ್ಸ್ನ ಹಲವಾರು ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದ್ದು, ಹಲವಾರು ಶಾಲೆಗಳಿಗೆ ರಜೆ ಸಾರಲಾಗಿದೆ.







