ನಾನು ರೈತರನ್ನು ಬೆಂಬಲಿಸುತ್ತಿರುವುದಕ್ಕೆ ಮೋದಿ ಸರಕಾರ ನನಗೆ ಕಿರುಕುಳ ನೀಡುತ್ತಿದೆ: ಅರವಿಂದ್ ಕೇಜ್ರಿವಾಲ್

ಹೊಸದಿಲ್ಲಿ, ಮಾ. 17: ತಾನು ರೈತರನ್ನು ಬೆಂಬಲಿಸುವುದಕ್ಕೆ ನರೇಂದ್ರ ಮೋದಿ ಸರಕಾರ ತನಗೆ ಕಿರುಕುಳ ನೀಡುತ್ತಿದೆ ಎಂದು ಆಪ್ ನ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವಿವಾರ ಹೇಳಿದ್ದಾರೆ.
ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಜಾಬ್ ನಲ್ಲಿ ರವಿವಾರ ನಡೆದ ಕಿಸಾನ್ ಮಹಾ ಪಂಚಾಯತ್ ನಲ್ಲಿ ಅವರು ಮಾತನಾಡಿದರು. "ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಚಳವಳಿ ಆರಂಭಿಸಿದಂದಿನಿಂದ ತಾನು ಪಾಲ್ಗೊಳ್ಳುತ್ತಿದ್ದೇನೆ. ಆದುದರಿಂದ ಮೋದಿ ಸರಕಾರ ನನಗೆ ತೊಂದರೆ ಉಂಟು ಮಾಡುತ್ತಿದೆ. ತನ್ನ ಸರಕಾರದ ಅಧಿಕಾರವನ್ನು ಕಸಿದುಕೊಳ್ಳಲು ಮೋದಿ ಸರಕಾರ ಸಂಸತ್ತಿನಲ್ಲಿ ಮಸೂದೆ ಮಂಡಿಸಿದೆ" ಎಂದು ಅವರು ಹೇಳಿದರು.
‘‘ರೈತರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ನಾನು ಮೋದಿ ಸರಕಾರಕ್ಕೆ ಪತ್ರ ಬರೆದಿದ್ದೇನೆ. ಇದರಿಂದ ಆಕ್ರೋಶಗೊಂಡ ಮೋದಿ ಸರಕಾರ ದಿಲ್ಲಿಯ ಎಲ್ಲ ಅಧಿಕಾರ ಮುಖ್ಯಮಂತ್ರಿಗೆ ಸೇರಿದ್ದಲ್ಲ. ಅದು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸೇರಿದ್ದು ಎಂದು ಮಸೂದೆ ತಂದಿದೆ. ಅವರು ಎಲ್ಲಾ ಅಧಿಕಾರವನ್ನು ಕಿತ್ತುಕೊಳ್ಳಲು ಬಯಸಿದ್ದಾರೆ. ಆದುದರಿಂದ ಇನ್ನು ಮುಂದೆ ಜೈಲುಗಳನ್ನು ನಿರ್ಮಾಣ ಮಾಡುವ ಕುರಿತ ಫೈಲ್ ಕೂಡ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೋಗಲಿದೆ. ನಾನು ದಿಲ್ಲಿಯಲ್ಲಿ ಇರುವ ವರೆಗೆ ರೈತರು ಆತಂಕಪಟ್ಟುಕೊಳ್ಳಬೇಕಿಲ್ಲ’’ ಎಂದು ಕೇಜ್ರಿವಾಲ್ ಹೇಳಿದ್ದಾರೆ.







