‘ಮಿಲಿಟರಿ ಡೈರೆಕ್ಟ್’ ಅಧ್ಯಯನ ವರದಿ: ಬಲಿಷ್ಟ ಸೇನೆಯಲ್ಲಿ ಚೀನಾ ಪ್ರಥಮ, ಭಾರತದ ಸ್ಥಾನವೆಷ್ಟು ಗೊತ್ತೇ?

ಹೊಸದಿಲ್ಲಿ, ಮಾ.21: ಚೀನಾ ವಿಶ್ವದಲ್ಲಿ ಅತ್ಯಂತ ಬಲಿಷ್ಟ ಸೇನೆಯನ್ನು ಹೊಂದಿದ್ದರೆ, ಸೂಪರ್ ಪವರ್ ಎಂದು ಕರೆಸಿಕೊಳ್ಳುವ ಅಮೆರಿಕ ಎರಡನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಸೇನಾಪಡೆ ವಿಶ್ವದ ನಾಲ್ಕನೇ ಬಲಿಷ್ಟ ಸೇನೆ ಎಂದು ‘ಮಿಲಿಟರಿ ಡೈರೆಕ್ಟ್’ ವೆಬ್ಸೈಟ್ ಬಿಡುಗಡೆ ಮಾಡಿರುವ ಅಧ್ಯಯನ ವರದಿ ತಿಳಿಸಿದೆ. ರಕ್ಷಣಾ ಕ್ಷೇತ್ರಕ್ಕೆ ಭಾರೀ ಅನುದಾನ ಮೀಸಲಿಡುವ ಹೊರತಾಗಿಯೂ ವಿಶ್ವದ 10 ಬಲಿಷ್ಟ ಸೇನೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ 79 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ.
69 ಅಂಕ ಪಡೆದಿರುವ ರಶ್ಯಾ ಮೂರನೇ ಸ್ಥಾನದಲ್ಲಿ , 61 ಅಂಕ ಪಡೆದಿರುವ ಭಾರತ ನಾಲ್ಕನೇ ಸ್ಥಾನದಲ್ಲಿ, ಫ್ರಾನ್ಸ್ 58 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಬ್ರಿಟನ್ 43 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ‘ಸರ್ವಶ್ರೇಷ್ಟ ಮಿಲಿಟರಿ ಬಲದ ಸೂಚ್ಯಂಕ’ ಅಧ್ಯಯನ ವರದಿಯಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅನುದಾನ, ಸಕ್ರಿಯ ಮತ್ತು ಸಕ್ರಿಯವಲ್ಲದ ಸೇನಾ ಸಿಬಂದಿಗಳ ಸಂಖ್ಯೆ, ವಾಯುಪಡೆ, ನೌಕಾಬಲ, ಭೂಸೇನೆ ಮತ್ತು ಪರಮಾಣು ಶಸ್ತ್ರಗಳ ಸಂಪನ್ಮೂಲ, ಸರಾಸರಿ ವೇತನ, ಆಯುಧಗಳ ತೂಕವನ್ನು ಲೆಕ್ಕ ಹಾಕಲಾಗಿದೆ. ಒಟ್ಟು 100 ಅಂಕಗಳಲ್ಲಿ 82 ಅಂಕ ಗಳಿಸಿದ ಚೀನಾ ಅಗ್ರಸ್ಥಾನ ಪಡೆದಿದೆ.
ಬಜೆಟ್ ಅನುದಾನ, ಸೇನಾ ಸಿಬಂದಿ, ವಾಯುಪಡೆ ಮತ್ತು ನೌಕಾಸೇನೆಯ ಬಲವನ್ನು ಪರಿಗಣಿಸಿದರೆ ಕಾಲ್ಪನಿಕ ಸೂಪರ್ ಸಂಘರ್ಷದಲ್ಲಿ ಚೀನಾ ವಿಶ್ವದಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಬಜೆಟ್ನಲ್ಲಿ ಅನುದಾನ ಮೀಸಲಿಡುವ ವಿಶ್ವದ ಪ್ರಮುಖ ದೇಶಗಳಲ್ಲಿ ಅಮೆರಿಕ ಅಗ್ರಸ್ಥಾನದಲ್ಲಿದ್ದು ವಾರ್ಷಿಕ 732 ಬಿಲಿಯನ್ ಡಾಲರ್ ಅನುದಾನ ಮೀಸಲಿಡುತ್ತದೆ. ಆ ಬಳಿಕದ ಸ್ಥಾನದಲ್ಲಿರುವ ಚೀನಾ ಬಜೆಟ್ನಲ್ಲಿ ವಾರ್ಷಿಕವಾಗಿ 261 ಬಿಲಿಯನ್ ಡಾಲರ್, ಮೂರನೇ ಸ್ಥಾನದಲ್ಲಿರುವ ಭಾರತ ವಾರ್ಷಿಕ 71 ಬಿಲಿಯನ್ ಡಾಲರ್ ಅನುದಾನ ಮೀಸಲಿಡುತ್ತದೆ.
ಅಮೆರಿಕದ ಬಳಿ 14,441 ಯುದ್ಧವಿಮಾನಗಳಿದ್ದರೆ ರಶ್ಯಾದ ಬಳಿ 4,682 ಮತ್ತು ಚೀನಾದ ಬಳಿ 3,587 ಯುದ್ಧವಿಮಾನಗಳಿವೆ. ರಶ್ಯಾದ ಬಳಿ ಯುದ್ಧಟ್ಯಾಂಕ್ ಮತ್ತಿತರ ಭೂಸೇನೆಯಲ್ಲಿ ಬಳಸುವ 54,866 ವಾಹನಗಳಿದ್ದರೆ ಅಮೆರಿಕದ ಬಳಿ 50,326, ಚೀನಾದ ಬಳಿ 41,641 ವಾಹನಗಳಿವೆ. ಚೀನಾದ ಬಳಿ 406 ಯುದ್ಧನೌಕೆಗಳಿದ್ದರೆ, ರಶ್ಯಾದ ಬಳಿ 278 ಹಾಗೂ ಭಾರತ ಮತ್ತು ಅಮೆರಿಕದ ಬಳಿ 202 ಯುದ್ಧನೌಕೆಗಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯುದ್ಧ ಸಂಭವಿಸಿದರೆ ಗೆಲುವು ಯಾರಿಗೆ ?
ಒಂದು ವೇಳೆ ಯುದ್ಧ ಸಂಭವಿಸಿದರೆ ಚೀನಾವು ತನ್ನಲ್ಲಿರುವ ಬಲಿಷ್ಟ ನೌಕಾಪಡೆಯಿಂದಾಗಿ ಗೆಲುವು ಪಡೆಯುತ್ತದೆ. ಅಮೆರಿಕದ ಬಳಿಯಿರುವ ಸಶಕ್ತ ವಾಯುಪಡೆ ಆ ದೇಶಕ್ಕೆ ಗೆಲುವು ತಂದುಕೊಡುತ್ತದೆ. ರಶ್ಯಾ ಭೂಸೇನೆಯಿಂದಾಗಿ ಗೆಲುವು ಪಡೆಯಲಿದೆ ಎಂದು ‘ಮಿಲಿಟರಿ ಡೈರೆಕ್ಟ್’ ವೆಬ್ಸೈಟ್ ವರದಿ ಮಾಡಿದೆ.







