ಬ್ರಿಟನ್:ಲಾಕ್‌ಡೌನ್ ವಿರುದ್ಧ ಪ್ರತಿಭಟನೆ: 36 ಮಂದಿಯ ಬಂಧನ

ಲಂಡನ್,ಮಾ.21: ಕೊರೋನ ವೈರಸ್ ಹರಡುವಿಕೆ ತಡೆಯಲು ಬ್ರಿಟನ್‌ನಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಹೇರಿರುವುದನ್ನು ಪ್ರತಿಭಟಿಸಿ ರಾಜಧಾನಿ ಲಂಡನ್‌ನಲ್ಲಿ ಶನಿವಾರ ನಡೆದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.
ಲಾಕ್‌ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಬ್ರಿಟಿಶ್ ಪೊಲೀಸರು ರವಿವಾರ ಸಂಜೆವರೆಗೆ 33 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಲಂಡನ್‌ನ ಹೈಡ್ ಪಾರ್ಕ್‌ನಲ್ಲಿ ಶನಿವಾರ ಮಧ್ಯಾಹ್ನ ಪ್ರತಿಭಟನಾ ರ್ಯಾಲಿ ಆರಂಭಗೊಂಡಿತ್ತು. ಪ್ರತಿಭಟನಕಾರರು ಸೆಂಟ್ರಲ್ ಲಂಡನ್‌ನೆಡೆಗೆ ಜಾಥಾದಲ್ಲಿ ತೆರಳುತ್ತಿದ್ದಾಗ, 100 ಮಂದಿಯಷ್ಟಿದ್ದ ಗುಂಪೊಂದು ಮತ್ತೆ ಪಾರ್ಕ್‌ಗೆ ವಾಪಸಾಗಿತ್ತು ಮತ್ತು ಅಲ್ಲಿದ್ದ ಕೆಲವು ಪೊಲೀಸ್ ಸಿಬ್ಬಂದಿಯೊಂದಿಗೆ ಹೊಯ್ ಕೈ ನಡೆಸಿತು ಮತ್ತು ಬಾಟಲಿ ಮತ್ತು ಕ್ಯಾನ್‌ಗಳನ್ನು ಅವರ ಮೇಲೆ ಎಸೆಯಿತು.
ಸೀಮಿತ ಕಾರಣಗಳನ್ನು ಹೊರತುಪಡಿಸಿ, ಮನೆಯಿಂದ ಹೊರಹೋಗುವುದನ್ನು ನಿಷೇಧಿಸುವ ಇಂಗ್ಲೆಂಡ್ ಸರಕಾರದ ಆದೇಶವನ್ನು ವಿರೋಧಿಸಿ ಈ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಜನವರಿ ತಿಂಗಳ ಆರಂಭದಲ್ಲಿ ಇಂಗ್ಲೆಂಡ್‌ನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳ ಹೆಚ್ಚಳಗೊಂಡು, ಹಲವಾರು ಮಂದಿ ಸಾವನ್ನ ಪ್ಪಿದ್ದರು ಹಾಗೂ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಹೇರಲಾಗಿದೆ.





