ದೇಶದಲ್ಲಿ ಮೂರು ತಿಂಗಳಲ್ಲೇ ಅತ್ಯಧಿಕ ಕೊರೋನ ಸೋಂಕಿನ ಪ್ರಕರಣ ದಾಖಲು

ಹೊಸದಿಲ್ಲಿ, ಮಾ. 21: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 43,846 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಇದು ಕಳೆದ ನಾಲ್ಕು ತಿಂಗಳಲ್ಲಿ ಒಂದೇ ದಿನ ವರದಿಯಾದ ಅತ್ಯಧಿಕ ಪ್ರಕರಣಗಳಾಗಿವೆ.
ಕಳೆದ 112 ದಿನಗಳಲ್ಲಿ ಅತ್ಯಧಿಕ ಕೊರೋನ ಸೋಂಕಿನ ಪ್ರಕರಣಗಳು ಇಂದು ವರದಿಯಾಗಿದೆ. ರವಿವಾರ ಬೆಳಗ್ಗೆ 8 ಗಂಟೆ ವರೆಗೆ ಕೊರೋನ ಸೋಂಕಿನಿಂದ 197 ಜನರು ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,59,755ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ, ಪಂಜಾಬ್, ಕೇರಳ, ಕರ್ನಾಟಕ ಹಾಗೂ ಗುಜರಾತ್ನಲ್ಲಿ ಒಂದೇ ದಿನ ಅತ್ಯಧಿಕ ಸಂಖ್ಯೆಯ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ಸರಕಾರದ ಅಂಕಿ-ಅಂಶಗಳು ಬಹಿರಂಗಪಡಿಸಿವೆ.
ದೇಶದಲ್ಲಿ ಕಳೆದ ಮೂರು ದಿನಗಳಲ್ಲಿ ಅತ್ಯಧಿಕ 1 ಲಕ್ಷ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಹೊಸ ಕೊರೋನ ಸೋಂಕಿನ ಪ್ರಕರಣಗಳು ಗುರುವಾರ 35,871, ಶುಕ್ರವಾರ 39,726 ಹಾಗೂ ಶನಿವಾರ 40,953 ವರದಿಯಾಗಿವೆ. ದೇಶದಲ್ಲಿ ಪ್ರಸ್ತುತ ಒಟ್ಟು ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 1.15 ಕೋಟಿಗೆ ಏರಿಕೆಯಾಗಿದೆ (1,15,99,13). ಮಹಾರಾಷ್ಟ್ರ ಹಾಗೂ ದಿಲ್ಲಿ ಸೇರಿದಂತೆ 8 ರಾಜ್ಯಗಳಲ್ಲಿ ಅತ್ಯಧಿಕ ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ ಎಂಬುದು ಆರೋಗ್ಯ ಸಚಿವಾಲಯ ಶನಿವಾರ ನೀಡಿದ ವರದಿ ಹೇಳಿದೆ. ಈ ನಡುವೆ ಕೇರಳದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಇಳಿಕೆಯಾಗುತ್ತಿದೆ ಎಂದು ಅದು ಹೇಳಿದೆ. ಮಹರಾಷ್ಟ್ರ ಕೊರೋನ ಅತಿ ಪೀಡಿತ ಪ್ರದೇಶವಾಗಿದ್ದು, ದೇಶದಲ್ಲಿ ದಿನನಿತ್ಯ ದಾಖಲಾಗುತ್ತಿರುವುದರಲ್ಲಿ ಶೇ. 62 ಇಲ್ಲಿಂದಲೇ ವರದಿಯಾಗುತ್ತಿದೆ.







