ಎಲ್ಗರ್ ಪರಿಷದ್ ಪ್ರಕರಣ: ಸ್ಟ್ಯಾನ್ ಸ್ವಾಮಿ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‍ಐಎ ನ್ಯಾಯಾಲಯ

ಮುಂಬೈ : ಎಲ್ಗರ್ ಪರಿಷದ್-ಮಾವೋವಾದಿ ನಂಟು ಪ್ರಕರಣದಲ್ಲಿ ಬಂಧನದಲ್ಲಿರುವ ಆದಿವಾಸಿ ಹಕ್ಕುಗಳ ಹೋರಾಟಗಾರ 83 ವರ್ಷದ ಸ್ಟ್ಯಾನ್ ಸ್ವಾಮಿ ಅವರ ಜಾಮೀನು ಅರ್ಜಿಯನ್ನು ವಿಶೇಷ ಎನ್‍ಐಎ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಕೆಲವೊಂದು ಪ್ರಮುಖ ಕಾರಣಗಳನ್ನು ಮುಂದಿಟ್ಟು ಹಾಗೂ ವೈದ್ಯಕೀಯ ಕಾರಣಗಳಿಂದಾಗಿ ಸ್ವಾಮಿ ಅವರ ಜಾಮೀನು ಅಪೀಲನ್ನು ಹೆಚ್ಚುವರಿ ಸೆಶನ್ಸ್ ಕೋರ್ಟಿನ ನ್ಯಾಯಾಧೀಶ ಡಿ ಇ ಕೊಥಾಲಿಕರ್ ತಿರಸ್ಕರಿಸಿದರು.
ಸ್ವಾಮಿ ಅವರನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ರಾಂಚಿಯಿಂದ ಬಂಧಿಸಲಾಗಿತ್ತು. ಅಂದಿನಿಂದ ಅವರನ್ನು ನವಿ ಮುಂಬೈಯ ತಲೋಜ ಸೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.
ಸ್ವಾಮಿ ಅವರು ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಹಾಗೂ ಅವರು ಎರಡೂ ಕಿವಿಗಳಲ್ಲಿ ಶ್ರವಣ ಶಕ್ತಿ ಕಳೆದುಕೊಂಡಿದ್ದಾರೆ, ಜತೆಗೆ ಅವರು ಹಲವು ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ಈಗಾಗಲೇ ಹೇಳಿದ್ದಾರೆ.
ಆದರೆ ಸ್ಟ್ಯಾನಿ ಅವರು ಸಿಪಿಐ(ಮಾವೋವಾದಿ) ಪಕ್ಷದ ಜತೆ ನಂಟು ಹೊಂದಿವೆಯೆನ್ನಲಾದ ವಿಸ್ತಾಪನ್ ವಿರೋಧಿ ಜನ್ ವಿಕಾಸ್ ಆಂದೋಲನ್, ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಇವುಗಳ ಪ್ರಬಲ ಬೆಂಬಲಿಗರಾಗಿದ್ದಾರೆಂದು ಹೇಳಿಕೊಂಡು ಅವರ ಜಾಮೀನು ಅಪೀಲನ್ನು ಎನ್‍ಐಎ ವಿರೋಧಿಸಿತ್ತು.
ಸ್ಟ್ಯಾನ್ ಸ್ವಾಮಿ ಅವರಿಗೆ ಈಲ್ಗರ್ ಪರಿಷದ್ ಜತೆಗಿರುವ ನಂಟನ್ನು ಸಾಬೀತುಪಡಿಸಲು ಎನ್‍ಐಎ ವಿಫಲವಾಗಿದೆ ಎಂದು ಸ್ಟ್ಯಾನ್ ಸ್ವಾಮಿ ಅವರ ವಕೀಲ ಶರೀಫ್ ಶೇಖ್ ತಮ್ಮ ವಾದ ಮಂಡನೆ ವೇಳೆ ಹೇಳಿದ್ದರು.







