ದಿಲ್ಲಿ ರೈತರ ಹೋರಾಟ ಸಂವಿಧಾನದ ಉಳಿವಿಗಾಗಿ ನಡೆಯುತ್ತಿರುವ ಹೋರಾಟ: ದಾವಣಗೆರೆಯಲ್ಲಿ ರಾಕೇಶ್ ಟಿಕಾಯತ್

ದಾವಣಗೆರೆ, ಮಾ.22: ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ಕೇವಲ ರೈತ, ಕಾರ್ಮಿಕರ ಉಳಿವಿಗಾಗಿ ಮಾತ್ರವಲ್ಲ. ಅದು ಬಾಬಾಸಾಹೇಬ್ ಅಂಬೇಡ್ಕರ್ ಅವೆರು ರಚಿಸಿರುವ ಸಂವಿಧಾನದ ಉಳಿವಿಗಾಗಿಯೂ ನಡೆಯುತ್ತಿರುವ ಹೋರಾಟವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ರಾಕೇಶ್ ಟಿಕಾಯತ್ ಬಣ್ಣಿಸಿದರು.
ಹಾವೇರಿಯಲ್ಲಿ ಭಾನುವಾರ ನಡೆದ ರೈತ ಪಂಚಾಯತ್ ಸಭೆಯಲ್ಲಿ ಪಾಲ್ಗೊಂಡು ಬೆಂಗಳೂರಿಗೆ ತರಳುವ ಮಾರ್ಗಮಧ್ಯೆ ದಾವಣಗೆರೆಗೆ ಆಗಮಿಸಿದ್ದ ಅವರು ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರೈತರ ಹೋರಾಟದಲ್ಲಿ ಭಾಗವಹಿಸಲು ರೈತರು, ಪ್ರಗತಿಪರರು ದೆಹಲಿಗೆ ಬರಬೇಕಾಗಿಲ್ಲ, ಅದರ ಬದಲು ಪ್ರತಿ ಜಿಲ್ಲೆಯಲ್ಲೂ ಹೋರಾಟ ನಡೆಸುವುದರ ಜೊತೆಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದೆಹಲಿ ಮಾದರಿ ಹೋರಾಟ ಪ್ರಾರಂಭಿಸಬೇಕು ಎಂದು ಕರೆ ನೀಡಿದರು.
ಜನರಿದ್ದರೇ ದೇಶ, ದೇಶ ವಿದ್ದರೇ ಜನರು. ಹೀಗಾಗಿ, ಜನರ ಉಳಿವಿಗಾಗಿಯೂ ಈ ಹೋರಾಟ ನಡೆಯುತ್ತಿದೆ. ಯುವಕರಿಗೆ ಕೆಲಸ ಕೊಡುತ್ತೇವೆಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನಹಿತ ಮರೆತು ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.
ರೈತ ಮುಖಂಡರು, ಜಿಲ್ಲಾ ಪಂಚಾಯತ್ ಸದಸ್ಯ ತೇಜಸ್ವಿ ಪಟೇಲ್ ಮಾತನಾಡಿ, ಎಲ್ಲಾ ಧರ್ಮಿಯರಿಗೆ ಒಂದೊಂದು ಪವಿತ್ರ ಸ್ಥಳವಿದೆ. ಅದೇ ರೀತಿ ರೈತರಿಗೆ ಯಾವುದಾದರೂ ಪವಿತ್ರ ಸ್ಥಳ ಇದ್ದರೆ, ಅದು ನಿರಂತರವಾಗಿ ರೈತರ ಹೋರಾಟ ನಡೆಯುತ್ತಿರುವ ಸಿಂಘೂ ಗಡಿಯಾಗಿದೆ. ಅಂದು ಯುಪಿಎ ಸರ್ಕಾರದ ವಿರುದ್ಧ ಮಹೇಂದ್ರ ಸಿಂಗ್ ಟಿಕಾಯತ್ ಅವರು ಹೋರಾಟ ಮಾಡಿದಾಗ, ಅವರನ್ನು ಹಿಂದೂಸ್ಥಾನಿ ಎಂದು ಕರೆದಿದ್ದರು. ಆದರೆ, ಅವರ ಮಗ ರಾಕೇಶ್ ಟಿಕಾಯತ್ ರೈತರ ಪರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಿದರೆ, ಅವರು ಖಲಿಸ್ತಾನಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ರೈತ ನಾಯಕರಾದ ಯುದ್ಧವೀರ್ ಸಿಂಗ್, ಚುಕ್ಕಿ ನಂಜುಂಡಸ್ವಾಮಿ, ಪ್ರಗತಿಪರ ಸಂಘಟನೆ ಮುಖಂಡರಾದ ಹೆಚ್.ಕೆ. ರಾಮಚಂದ್ರಪ್ಪ, ಅನೀಷ್ ಪಾಷ, ರಾಮಚಂದ್ರ ಕಲಾಲ್, ಎಲ್.ಹೆಚ್. ಅರುಣ್ ಕುಮಾರ್, ಹೊನ್ನೂರು ಮುನಿಯಪ್ಪ, ಅರುಣ್ ಕುಮಾರ್ ಕುರುಡಿ, ಆವರಗೆರೆ ಚಂದ್ರು, ಆವರಗೆರೆ ವಾಸು, ಜಬೀನಾ ಖಾನಂ, ಸತೀಶ್ ಅರವಿಂದ್, ಮಂಜುನಾಥ ಕುಕ್ಕವಾಡ, ಸುನೀತ್ ಕುಮಾರ್, ಬನಶ್ರೀ, ಅಣಬೇರು ತಿಪ್ಪೇಸ್ವಾಮಿ, ಆವರಗೆರೆ ರುದ್ರಮೂನಿ, ಮಲ್ಲಾಪುರ ದೇವರಾಜ್ ಮತ್ತಿತರರು ಭಾಗವಹಿಸಿದ್ದರು.







