"ಚುನಾವಣೆ ಹತ್ತಿರ ಬಂದಾಗ ನಮ್ಮ ಜತೆ ಕುಣಿದರೆ ನಮ್ಮ ಹೊಟ್ಟೆ ತುಂಬುವುದಿಲ್ಲ"
ಕಾಂಗ್ರೆಸ್-ಬಿಜೆಪಿ ರಾಜಕಾರಣಿಗಳ ವಿರುದ್ಧ ಅಸ್ಸಾಂ ಚಹಾ ತೋಟ ಕಾರ್ಮಿಕರ ಆಕ್ರೋಶ

ಗುವಾಹಟಿ: ಮಾರ್ಚ್ 27ರಂದು ವಿಧಾನಸಭಾ ಚುನಾವಣೆ ನಡೆಯಲಿರುವ ಅಸ್ಸಾಂ ರಾಜ್ಯದಲ್ಲಿನ ಚಹಾ ತೋಟ ಕಾರ್ಮಿಕರನ್ನು ಈಗ ಎಲ್ಲಾ ರಾಜಕೀಯ ಪಕ್ಷಗಳೂ ನಾಮುಂದು ತಾಮುಂದು ಎಂದು ಓಲೈಸಲು ಆರಂಭಿಸಿವೆ. ರಾಜ್ಯದ 10 ಲಕ್ಷಕ್ಕೂ ಅಧಿಕ ಚಹಾ ತೋಟ ಕಾರ್ಮಿಕರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದು ಅಭ್ಯರ್ಥಿಗಳ ಸೋಲು, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಚಹಾ ತೋಟ ಕಾರ್ಮಿಕರನ್ನು ಭೇಟಿಯಾಗಿದ್ದರೆ ರಾಜ್ಯದ ಬಿಜೆಪಿ ಸರಕಾರ ಅದಾಗಲೇ ಅವರ ದಿನದ ವೇತನವನ್ನು ರೂ 50ರಷ್ಟು ಏರಿಸಿದೆ.
ಅತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಚಹಾ ತೋಟ ಕಾರ್ಮಿಕರ ಜತೆ ಸೇರಿ ಚಹಾ ಎಲೆಗಳನ್ನು ಆರಿಸಿದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಾರ್ಮಿಕರಿಗೆ ರೂ. 350 ದಿನದ ವೇತನ ನೀಡುವ ಭರವಸೆ ನೀಡಿದ್ದಾರೆ.
ಆದರೆ ಭರವಸೆಗಳು ಈ ಕಾರ್ಮಿಕರ ಮೊಗದಲ್ಲಿ ಸಂತಸ ಮೂಡಿಸಿಲ್ಲ ಎಂದು ವರದಿಗಳು ತಿಳಿಸಿವೆ. "ನಾವು ಯಾರನ್ನೂ ನಂಬುವುದಿಲ್ಲ. ನಮಗೆ ಏನೂ ದೊರೆಯುವುದಿಲ್ಲ. ನಮ್ಮ ಮನೆಗಳಲ್ಲಿ ಶೌಚಾಲಯಗಳೂ ಇಲ್ಲ, ಬಹಿರ್ದೆಸೆಗೆ ನಾವು ರಾತ್ರಿ ಸಮಯ ಕೂಡ ಚಹಾ ತೋಟಗಳಿಗೆ ಹೋಗಬೇಕಾಗುತ್ತರೆ. ನಮಗೆ ಅಸುರಕ್ಷತೆಯ ಭಾವನೆಯಿದೆ. ಸರಕಾರ ಹಲವಾರು ಬಾರಿ ಶೌಚಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದೆ ಆದರೆ ಅದನ್ನು ಈಡೇರಿಸಿಲ್ಲ" ಎಂದು ಹಲವಾರು ಕಾರ್ಮಿಕರು ಹೇಳುತ್ತಾರೆ.
"ಚಹಾ ತೋಟ ಕಾರ್ಮಿಕರಿಗೆ ದೊರೆಯುವ ವೇತನ ಅತ್ಯಲ್ಪ. ನಾವು ದಿನದಲ್ಲಿ 8 ಗಂಟೆ ದುಡಿದರೂ ನಮಗೆ ದೊರೆಯುವುದು ಕೇವಲ ರೂ 167. ಇದರಿಂದ ಜೀವನ ಸಾಗಿಸಲು ಸಾಧ್ಯವಿಲ್ಲ. ಪ್ರಿಯಾಂಕ ಗಾಂಧಿ ಬಂದು ನಮ್ಮೊಡನೆ ಚಹಾ ಎಲೆಗಳನ್ನು ಆಯ್ದರು. ಆದರೆ ನಾಟಕಗಳು ನಮ್ಮ ಹೊಟ್ಟೆ ತುಂಬಿಸುವುದಿಲ್ಲ, ಬಿಜೆಪಿ ಕೂಡ ದೊಡ್ಡ ಭರವಸೆಗಳನ್ನು ನೀಡಿದೆ. ಆದರೆ ಕಳೆದೈದು ವರ್ಷಗಳಲ್ಲಿ ಅವರೇನು ಮಾಡಿದ್ದಾರೆ?" ಎಂದು ಹಲವು ಕಾರ್ಮಿಕರು ಪ್ರಶ್ನಿಸುತ್ತಾರೆ.
"ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ಕೇಳುವುದಿಲ್ಲ, ಚುನಾವಣೆ ಸಂದರ್ಭ ರಾಜಕಾರಣಿಗಳು ನಮ್ಮೊಂದಿಗೆ ಕುಣಿಯುತ್ತಾರೆ, ತಿನ್ನುತ್ತಾರೆ ಹಾಗೂ ಎಲ್ಲಾ ವಿಧದ ನಾಟಕ ಮಾಡುತ್ತಾರೆ. ಆದರೆ ನಾವು ಹೇಗೆ ಬದುಕುತ್ತಿದ್ದೇವೆ ಎಂದು ತಿಳಿಯಲು ಒಬ್ಬನೇ ಒಬ್ಬ ನಾಯಕ ಅಥವಾ ಪಕ್ಷ ಕಾರ್ಯಕರ್ತ ಬಂದಿಲ್ಲ" ಎಂದು ಕೆಲ ಕಾರ್ಮಿಕರು ದೂರುತ್ತಾರೆ.







