‘ನಾಡೋಜ ಪ್ರೊ.ಕೆ.ಪಿ.ರಾವ್ ಬಹುಮುಖ ವ್ಯಕ್ತಿತ್ವವುಳ್ಳ ವಿದ್ವಾಂಸ’

ಉಡುಪಿ, ಮಾ.22: ನಾಡೋಜ ಪ್ರೊ.ಕೆ.ಪಿ.ರಾವ್ ಅವರು ಬಹುಮುಖ ವ್ಯಕ್ತಿತ್ವವುಳ್ಳವರು. ವಿಜ್ಞಾನ, ವೇದಗಳು, ಪಾಣಿನಿಯ ವ್ಯಾಕರಣ ಸೂತ್ರ ಗಳು, ಪಶ್ಚಿಮದ ವಿದ್ವಾಂಸರು ನಮ್ಮ ಪ್ರಾಚೀನ ಗ್ರಂಥಗಳನ್ನು ಕುರಿತು ನಡೆಸಿದ ಅಧ್ಯಯನ ಎಲ್ಲವನ್ನೂ ಪರಿಶೀಲಿಸಿದ ಪ್ರೊ.ಕೆ. ಪಿ. ರಾಯರದು ವಿಶಿಷ್ಟ ವ್ಯಕ್ತಿತ್ವ ಎಂದು ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ ಹೇಳಿದ್ದಾರೆ.
ಪರ್ಕಳದ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವೇದಿಕೆಯಲ್ಲಿ ಡಾ.ಎನ್.ಟಿ. ಭಟ್ಟರು ಬರೆದ ‘ನಾಡೋಜ ಕೆ.ಪಿ.ರಾಯರ ನಾಡಿ, ನುಡಿ, ನಡೆ’ ಪುಸ್ತಕದ ವಿಸ್ತೃತ ಆವೃತ್ತಿಯನ್ನು ರವಿವಾರ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡುತ್ತಿದ್ದರು.
ಅಭಿನಂದನೆಗೆ ಉತ್ತರಿಸಿದ ಪ್ರೊ.ಕೆ.ಪಿ.ರಾವ್, ವೇದಗಳು ಜ್ಞಾನಿಗಳ ಉಕ್ತಿಗಳೆಂದು, ನಾರಾಯಣ ಭಟ್ಟತಿರಿಯವರು ಪಾಣಿನಿಯ ನಂತರದ ಮಹಾ ವ್ಯಾಕರಣಕಾರರೆಂದು ತಿಳಿಸಿದರು. ಕೆ.ಪಿ.ರಾಯರ ವಿಚಾರಧಾರೆಗಳನ್ನು ಪುಸ್ತಕದಲ್ಲಿ ಅಡಕಗೊಳಿಸಿರುವುದಾಗಿ ಲೇಖಕ ಡಾ.ಎನ್. ತಿರುಮಲೇಶ್ವರ ಭಟ್ ತಿಳಿಸಿದರು.
ಡಾ.ಎನ್.ಟಿ.ಭಟ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಡಾ.ಉದಯ ಶಂಕರ್ ಅವರು ಕೆ.ಪಿ ರಾವ್ ಹಾಗೂ ಎನ್.ಟಿ ಭಟ್ಟರನ್ನು ಅಭಿನಂದಿಸಿದರು. ಕೃತಿಯನ್ನು ಪರಿಚಯಿಸಿದ ಪ್ರಾಧ್ಯಾಪಕ ಡಾ.ಜನಾರ್ದನ ಭಟ್ ಬೆಳ್ಮಣ್ಣು , ಇದು ಕೆ.ಪಿ. ರಾಯರ ವಿಶಿಷ್ಟ ಅನುಭವಗಳನ್ನೂ, ಅವರ ಪ್ರಕಟವಾಗಲಿರುವ ಕಾದಂಬರಿಯ ಸಾರವನ್ನೂ ಒಳಗೊಂಡಿದೆ ಎಂದರು.
ವಿದುಷಿ ಸರೋಜ ಆಚಾರ್ಯ ಪ್ರಾರ್ಥಿಸಿದರೆ, ಉಮಾಶಂಕರಿ ವಂದಿಸಿದರು. ಶ್ರೀನಿವಾಸ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ಮೊದಲು ಶರತ್ ಹಳೆಯಂಗಡಿ ಇವರಿಂದ ಗಿಟಾರ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.









