ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಪ್ರಚಾರೋಪನ್ಯಾಸ

ಮಂಗಳೂರು, ಮಾ.22: ಭಾಷೆ ಎಂಬುದು ಜನಸಂಸ್ಕೃತಿಯ ಬಿಂಬ, ಸಮುದಾಯವೊಂದರ ಅಸ್ಮಿತೆ. ಜನರನ್ನು ಒಗ್ಗೂಡಿಸಬಲ್ಲ ಶಕ್ತಿ ಭಾಷೆಗಿದೆ. ಶಿಕ್ಷಣದ ಕೊರತೆಯಿಂದಾಗಿ ಸಹಜವಾಗಿಯೇ ಬ್ಯಾರಿಗಳಲ್ಲಿ ಸಾಹಿತ್ಯದ ಆಸಕ್ತಿ ಅಷ್ಟಾಗಿರಲಿಲ್ಲ. ಒಂದಷ್ಟು ವಿದ್ಯೆ ಪಡೆದ ಕೆಲವೇ ಮಂದಿ ಮಾತ್ರ ಸಾಹಿತ್ಯದಲ್ಲಿ ಆಸಕ್ತಿ ತೋರಿದ್ದರು. ಹೀಗೆ ಸಾಹಿತ್ಯ ಕೃಷಿ ಮಾಡಿದವರೆಲ್ಲರೂ ತಮ್ಮ ಪ್ರತಿಭೆಯನ್ನು ಧಾರೆ ಎರೆದದ್ದು ಕನ್ನಡ ಸಾಹಿತ್ಯಕ್ಕೆ ಎಂಬುದು ಗಮನಾರ್ಹ. ಬ್ಯಾರಿ ಭಾಷೆಯಲ್ಲಿ ಹಲವಷ್ಟು ಜನಪದ ಹಾಡುಗಳು, ಕಥೆಗಳಿದ್ದರೂ ಕೂಡಾ ಕ್ರಮೇಣ ನೆನಪಿನಿಂದ ಮರೆಯಾಗುತ್ತಾ ಬಂದದ್ದು ವಿಪರ್ಯಾಸ ಎಂದು ಸಾಹಿತಿ ಶಂಶುದ್ದೀನ್ ಮಡಿಕೇರಿ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಮೆಲ್ಕಾರ್ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕಾಲೇಜಿ ನಲ್ಲಿ ಇತ್ತೀಚೆಗೆ ನಡೆದ ‘ಬ್ಯಾರಿ ಭಾಷೆ ಮತ್ತು ಸಾಹಿತ್ಯ - ಒಂದು ಅವಲೋಕನ’ ಎಂಬ ವಿಷಯದ ಬಗ್ಗೆ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯಾವುದೇ ಭಾಷೆಗೆ ಸರಿಸಮಾನವಾಗಿ ನಿಲ್ಲಬಲ್ಲ ಬೃಹತ್ ಶಬ್ಧ ಭಂಡಾರ ಬ್ಯಾರಿ ಭಾಷೆಯಲ್ಲೂ ಇದೆ. ಈ ಶಬ್ಧ ಭಂಡಾರವನ್ನು ಸಂಗ್ರಹಿಸುವ ಮೂಲಕ ದ್ರಾವಿಡ ಭಾಷೆಗಳ ತೌಲನಿಕ ಅಧ್ಯಯನ ಮಾಡಲು ಸಾಧ್ಯವಾಗಬಹುದು. ಅಲ್ಲದೆ ಬ್ಯಾರಿ ಭಾಷೆಯ ಮೂಲ ರೂಪದ ಪುನರ್ ನಿರ್ಮಾಣ ಕೂಡಾ ಸಾಧ್ಯವಾಗಬಹುದು ಎಂಬುದು ಭಾಷಾ ತಜ್ಞರ ಅಭಿಮತ ಎಂದು ಶಂಶುದ್ದೀನ್ ಮಡಿಕೇರಿ ಹೇಳಿದರು.
ಮೆಲ್ಕಾರ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಅಬ್ಧುಲ್ಲತೀಫ್ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಎ. ಸಿದ್ದೀಕ್ ಸ್ವಾಗತಿಸಿದರು. ಬ್ಯಾರಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾದ ಅಹ್ಮದ್ ಬಾವ ಮೊದಿನ್, ಅಬ್ದುರ್ರಹ್ಮಾನ್ ಕುತ್ತೆತ್ತೂರು, ಸಹಪ್ರಾಧ್ಯಾಪಕ ಹೈದರಾಲಿ ಉಪಸ್ಥಿತರಿದ್ದರು. ಇಸಾಮುನ್ನೀಸ ಕಾರ್ಯಕ್ರಮ ನಿರೂಪಿಸಿದರು.







