ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಕಿಲ್ಲೂರಿನ ಉಸ್ತಾದರ ಮಗಳು
ಎಸೆಸೆಲ್ಸಿಯಲ್ಲಿ ರಾಜ್ಯ-ಜಿಲ್ಲಾ ಮಟ್ಟದಲ್ಲಿ ರ‍್ಯಾಂಕ್ ಪಡೆದಿದ್ದ ಆಯಿಶಾ

ಮಂಗಳೂರು, ಮಾ.22: ಹೊಸದಿಲ್ಲಿಯ ‘ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾ’ ಕಳೆದ ಜನವರಿಯಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಕಿಲ್ಲೂರಿನ ಅಬ್ದುರ್ರಹ್ಮಾನ್ ಮುಸ್ಲಿಯಾರ್‌ರ ಪುತ್ರಿ ಎಂ.ಆಯಿಶಾ ಪ್ರಥಮ ಯತ್ನದಲ್ಲೇ ತೇರ್ಗಡೆ ಹೊಂದಿ ಗಮನ ಸೆಳೆದಿದ್ದಾರೆ.
2015ರಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ನಾಲ್ಕನೇ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿದ್ದ ಆಯಿಶಾ ಇದೀಗ ಸಿಎ ಪರೀಕ್ಷೆಯಲ್ಲಿ ಪ್ರಥಮ ಯತ್ನದಲ್ಲೇ ಚಾರ್ಟರ್ಡ್ ಅಕೌಂಟೆಂಟ್ ಆಗಿ ಹೊರ ಹೊಮ್ಮಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಿಲ್ಲೂರಿನ ಸರಕಾರಿ ಹಿಪ್ರಾ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸೆಸ್ಸೆಲ್ಸಿ ಪೂರೈಸಿದ್ದ ಆಯಿಶಾ ಪಿಯುಸಿಯಲ್ಲಿ 10 ಟಾಪರ್, ಸಿಪಿಟಿಯಲ್ಲಿ ದೇಶದಲ್ಲಿ 21ನೇ ಸ್ಥಾನ ಹಾಗೂ ಐಪಿಸಿಸಿಯಲ್ಲಿ ಆಳ್ವಾಸ್ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದರು.
ಮೂಲತಃ ಪುತ್ತೂರು ತಾಲೂಕಿನ ಕುಂತೂರಿನ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಭದ್ರಾವತಿ, ಪೊಸೋಟು, ಬಾಯಾರು ಮತ್ತಿತರ ಪ್ರದೇಶದ ಮಸೀದಿಗಳಲ್ಲಿ ಖತೀಬ್ ಆಗಿದ್ದರು. ಮಡಿಕೇರಿಯ ಉಮೈಮಾ ಅವರನ್ನು ಮದುವೆಯಾಗಿದ್ದ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಸುಮಾರು 15 ವರ್ಷದ ಹಿಂದೆ ಕಿಲ್ಲೂರಿನಲ್ಲಿ ನೆಲೆಸತೊಡಗಿದರು. ಹಾಗೇ ಅಲ್ಲೇ 1 ಎಕರೆ ಕೃಷಿ ತೋಟವನ್ನು ಖರೀದಿಸಿದ್ದರು. ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸಲಾಗದ ಕಾರಣ ಕೃಷಿಯಲ್ಲೇ ಬದುಕು ಕಟ್ಟತೊಡಗಿದರು.
ಕಿಲ್ಲೂರು ಮುಹಿಯುದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿಯೂ ಆಗಿರುವ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಮತ್ತು ಗೃಹಿಣಿ ಉಮೈಮಾ ದಂಪತಿಗೆ ನಾಲ್ಕು ಮಕ್ಕಳು. ಹಿರಿಯ ಪುತ್ರಿ ಎಂಎಸ್ಸಿ- ಬಿಎಡ್ ಪೂರೈಸಿ ಖಾಸಗಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ದ್ವಿತೀಯ ಪುತ್ರಿ ಆಯಿಶಾ ಇದೀಗ ಸಿಎ ಪಾಸ್ ಮಾಡಿದ್ದಾರೆ. ಪುತ್ರ ಮುಹಮ್ಮದ್ ಆಶಿಕ್ ಮಂಗಳೂರು ವಿವಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಇನ್ನೋರ್ವ ಪುತ್ರಿ ನಿಶ್ಮಾ 10ನೆ ತರಗತಿ ಕಲಿಯುತ್ತಿದ್ದಾರೆ.
ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಉಸ್ತಾದರೊಬ್ಬರ ಪುತ್ರಿಯ ಈ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೊಳ ಗಾಗುತ್ತಿದ್ದು, ಆಯಿಶಾ ಇತರರಿಗೂ ಮಾದರಿಯಾಗಲಿ ಎಂಬ ಆಶಯ ವ್ಯಕ್ತವಾಗುತ್ತಿದೆ.
''ಎಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದಾಗಲೇ (612) ಸಿಎ ಮಾಡಬೇಕು ಎಂಬ ಆಸೆ ಇತ್ತು. ಅದರಂತೆ ಮಂಗಳೂರಿನ ಸಿಎ ಅಬ್ದುಸ್ಸಮದ್ ಅವರ ಬಳಿ ತರಬೇತಿ ಪಡೆದುಕೊಂಡೆ. ತಂದೆ ಮತ್ತು ತಾಯಿಯ ಪ್ರೋತ್ಸಾಹವೂ ಇತ್ತು. ಹೀಗೆ ಎಲ್ಲರ ಸಹಕಾರದಿಂದ ನಾನು ಪ್ರಥಮ ಹಂತದಲ್ಲಿ ಸಿಎ ಮಾಡಿದೆ. ಮುಂದೆ ಉದ್ಯೋಗಕ್ಕೆ ಸೇರಬೇಕು ಎಂದು ನಿರ್ಧರಿಸಿದ್ದೇನೆ''.
- ಎಂ. ಆಯಿಶಾ, ಪ್ರಥಮ ಯತ್ನದಲ್ಲೇ ಸಿಎ ಪಾಸ್ ಮಾಡಿದ ವಿದ್ಯಾರ್ಥಿನಿ
''ಹಲವು ವರ್ಷಗಳ ಕಾಲ ಬೇರೆ ಬೇರೆ ಮಸೀದಿಯಲ್ಲಿ ಖತೀಬ್ ಆಗಿದ್ದೆ. ಕೃಷಿಯಲ್ಲೂ ತೊಡಗಿಸಿಕೊಂಡಿದ್ದೆ. ಕೊರೋನ-ಲಾಕ್‌ಡೌನ್ ಬಳಿಕ ಖತೀಬ್ ಆಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಕೃಷಿಯಲ್ಲೇ ಜೀವನ ಸಾಗಿಸುತ್ತಿದ್ದೇನೆ. ನನಗೆ ಮೂರು ಹೆಣ್ಣು ಮತ್ತು ಒಬ್ಬ ಗಂಡು ಸಹಿತ ನಾಲ್ಕು ಮಕ್ಕಳು. ನನ್ನ ಈ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಆಸೆ ಇತ್ತು. ಅದರಂತೆ ಇಬ್ಬರು ಹೆಣ್ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅದರಲ್ಲಿ ಯಶಸ್ವಿಯಾದೆ. ಇನ್ನೀಗ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಗೂ ಉನ್ನತ ಶಿಕ್ಷಣ ಕೊಡಿಸುವ ಗುರಿ ಹೊಂದಿರುವೆ. ಮಗಳು ಆಯಿಶಾ 8ನೆ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದಳು. ಬಳಿಕ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆದಳು. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಎಸೆಸ್ಸೆಲ್ಸಿಯಲ್ಲಿ ಉತ್ತಮ ಸ್ಥಾನದಲ್ಲಿ ತೇರ್ಗಡೆಯಾದಳು. ಎಸೆಸ್ಸೆಲ್ಸಿ ಪೂರೈಸಿದೊಡನೆ ಸಿಎ ಮಾಡುವ ಗುರಿ ಹಾಕಿಕೊಂಡಿದ್ದಳು. ನಾನು ಕೂಡ ಪ್ರೋತ್ಸಾಹ ನೀಡಿದೆ. ಅವಳ ಈ ಸಾಧನೆ ನನಗೆ ತುಂಬಾ ತೃಪ್ತಿ ತಂದಿದೆ''.
- ಅಬ್ದುರ್ರಹ್ಮಾನ್ ಮುಸ್ಲಿಯಾರ್, (ಆಯಿಶಾಳ ತಂದೆ)







