ಮೈಸೂರು: ಪೊಲೀಸರ ಲಾಠಿ ಏಟಿಗೆ ಕೆಳಗೆ ಬಿದ್ದ ಬೈಕ್ ಸವಾರ ಲಾರಿ ಹರಿದು ಮೃತ್ಯು; ಆರೋಪ
ಸಾರ್ವಜನಿಕರಿಂದ ಪೊಲೀಸರಿಗೆ ಥಳಿತ; ವಾಹನ ಜಖಂ

ಮೈಸೂರು,ಮಾ.22: ಬೈಕ್ ಸವಾರನಿಗೆ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದಿದ್ದಾಗ ಸಂಚಾರ ಪೊಲೀಸರು ಲಾಠಿಯಲ್ಲಿ ಹೊಡೆದ ಪರಿಣಾಮ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಹಿಂಬದಿಯಿಂದ ಲಾರಿ ಹರಿದು ಸಾವಿಗೀಡಾಗಿರುವ ದಾರುಣ ಘಟನೆ ನಗರದ ಹೊರವಲಯದ ಹಿನಕಲ್ ರಿಂಗ್ ರಸ್ತೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಎಚ್.ಡಿ.ಕೋಟೆ ಮೂಲದ ದೇವರಾಜು ಎಂದು ಹೇಳಲಾಗುತ್ತಿದೆ. ಈತನ ಜೊತೆ ಇದ್ದ ಸಹ ಸವಾರನಿಗೂ ಗಂಭೀರ ಗಾಯಗಳಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಹೆಲ್ಮೆಟ್ ಹಾಕದೆ ಸಂಚರಿಸುತ್ತಿದ್ದಾಗ ಪೊಲೀಸರು ಬೈಕ್ ಸವಾರನಿಗೆ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಆದರೆ ಸವಾರ ಬೈಕ್ ನಿಲ್ಲಿಸದಿದ್ದಾಗ ಸಂಚಾರ ಪೊಲೀಸರು ಲಾಠಿಯಲ್ಲಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಬೈಕ್ ಸವಾರ ಕೆಳಗೆ ಬಿದ್ದಿದ್ದು, ಹಿಂಬದಿಯಿಂದ ಲಾರಿ ಹರಿದು ಸಾವಿಗೀಡಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆ ಬಳಿಕ ಆಕ್ರೋಶಿತರಾದ ಸಾರ್ವಜನಿಕರು ಪೊಲೀಸರನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರ ವಾಹನವನ್ನು ಬ್ಯಾರಿಕೇಡ್‍ನಿಂದ ಹಾನಿಗೊಳಿಸಿದ್ದಾರೆ.
ಗರುಡಾ ವಾಹನದ ಚಾಲಕ ಮಂಜುನಾಥ್, ವಿವಿಪುರಂ ಸಂಚಾರ ವಿಭಾಗದ ಎಎಸ್‍ಐ ಸ್ವಾಮಿನಾಯಕ್ ಅವರಿಗೆ ಜನರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.







