ಸಮುದಾಯ ಭವನಗಳ ನಿರ್ಮಾಣಕ್ಕೆ 391 ಕೋಟಿ ರೂ.ಅಗತ್ಯ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು, ಮಾ. 22: ರಾಜ್ಯದಲ್ಲಿ 2,200 ವಿವಿಧ ಸಮುದಾಯ ಭವನ ನಿರ್ಮಾಣಕ್ಕೆ ಬೇಡಿಕೆ ಇದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಸಮುದಾಯ ಭವನ ನಿರ್ಮಾಣಕ್ಕೆ ಒಟ್ಟು 391 ಕೋಟಿ ರೂ.ಗಳ ಅಗತ್ಯವಿದೆ. ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮ ಮತ್ತು ಪಟ್ಟಣ ಪಂಚಾಯ್ತಿಯತ್ ವ್ಯಾಪ್ತಿಯಲ್ಲಿ 10 ಲಕ್ಷ ರೂ., ತಾಲೂಕು ಕೇಂದ್ರದಲ್ಲಿ 25 ಲಕ್ಷ ರೂ.ಹಾಗೂ ಜಿಲ್ಲಾ ಕೇಂದ್ರದಲ್ಲಿ 50 ಲಕ್ಷ ರೂ.ಒದಗಿಸಲಾಗುವುದು ಎಂದು ವಿವರಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಿವಾನಂದ ಪಾಟೀಲ್, ಬೀದರ್ ಜಿಲ್ಲೆ ಬಸವಕಲ್ಯಾಣಕ್ಕೆ 500 ಕೋಟಿ ರೂ. ಘೋಷಣೆ ಮಾಡಿ, 200 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ, ನಿಜಶರಣ ಅಂಬಿಗರ ಚೌಡಯ್ಯ ಇವರ ಸಮುದಾಯ ಭವನ ನಿರ್ಮಾಣಕ್ಕೆ 2018ರಿಂದ ಅನುದಾನ ನೀಡುತ್ತಿಲ್ಲ. ನಿಗದಿತ ಕಾಲಮಿತಿಯಲ್ಲಿ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.





