ಸಿಎಂ ಬಿಎಸ್‌ವೈ ಪುತ್ರನ ಕಾರು ತಡೆದು ನ್ಯಾಯಕ್ಕೆ ಅಂಗಲಾಚಿದ್ದ ಮಹಿಳೆಗೆ ದುಷ್ಕರ್ಮಿಗಳಿಂದ ಹಲ್ಲೆ

ಚಿಕ್ಕಮಗಳೂರು, ಮಾ.22: ಜಮೀನು ವಿಚಾರದಲ್ಲಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್ ಬೆಂಬಲಿಗರು ತಮ್ಮ ಕುಟುಂಬಕ್ಕೆ ನಿರಂತರ ಕಿರುಕುಳ ನೀಡುತ್ತಿರುವುದಲ್ಲದೇ ಹಲ್ಲೆ, ಕೊಲೆ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿ ಇತ್ತೀಚೆಗೆ ನಗರದಲ್ಲಿ ಸಿಎಂ ಪುತ್ರ ವಿಜಯೇಂದ್ರ ಕಾರು ತಡೆದು ನ್ಯಾಯಕ್ಕೆ ಅಂಗಲಾಚಿದ್ದ ಮಹಿಳೆಯ ಮೇಲೆ ಸೋಮವಾರ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆಂದು ತಿಳಿದು ಬಂದಿದೆ.
ತರೀಕೆರೆ ಭದ್ರಾವತಿ ಗಡಿಯಲ್ಲಿರುವ ಶಂಕರಘಟ್ಟ ಸಮೀಪದ ದೊಡ್ಡ ಕುಂದೂರು ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಸನ್ನ ಎಂಬವರ ಪತ್ನಿ ಮಮತಾ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಗ್ರಾಮದ ಸತ್ಯರಾಜ್, ಶ್ರೀನಿವಾಸ್, ಶಿವು ಮತ್ತಿತರರು ಹಲ್ಲೆ ಮಾಡಿದ ಆರೋಪಿಗಳೆಂದು ತಿಳಿದು ಬಂದಿದೆ.
ಸೋಮವಾರ ಮಧ್ಯಾಹ್ನದ ವೇಳೆ ದೊಡ್ಡಕುಂದೂರ್ ಗ್ರಾಮದ ತನ್ನ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿಗಳು ಜಮೀನು ವಿಚಾರವಾಗಿ ತಗಾದೆ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ, ಚಾಕುವಿನಿಂದ ಕೈ, ಕಾಲು, ಮೈಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಮಮತಾ ಪತ್ನಿ ಪ್ರಸನ್ನ ದೊಡ್ಡ ಕುಂದೂರು ಗ್ರಾಮದಲ್ಲಿ 2008ರಲ್ಲಿ 1.81 ಕೋಟಿ ರೂ. ನೀಡಿ 50 ಎಕರೆ ಜಮೀನು ಖರೀದಿ ಮಾಡಿದ್ದು, ಈ ಪೈಕಿ ಜಮೀನು ಮಾಲಕರಿಗೆ 1.52 ಕೋ. ರೂ. ಹಣವನ್ನು ಪ್ರಸನ್ನ ಸಂದಾಯ ಮಾಡಿದ್ದಾರೆ. ಆದರೆ ಜಮೀನು ಮಾಲಕ ಖರೀದಿದಾರರ ಹೆಸರಿಗೆ ಜಮೀನು ಖಾತೆ ಮಾಡಿಕೊಟ್ಟಿಲ್ಲ. ಇದನ್ನು ಪ್ರಶ್ನಿಸಿ ಪ್ರಸನ್ನ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೂ ಭೂ ಮಾಲಕ ಹಾಗೂ ಆತನ ಬೆಂಬಲಿಗರು ತರೀಕೆರೆ ಶಾಸಕ ಸುರೇಶ್ ಬೆಂಬಲದಿಂದ ಪ್ರಸನ್ನ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ.
ಈ ಪ್ರಕರಣ ಸಂಬಂಧ ಇತ್ತೀಚೆಗೆ ಪ್ರಸನ್ನ ಅವರ ಪತ್ನಿ ಹಾಗೂ ಕುಟುಂಬಸ್ಥರು ಚಿಕ್ಕಮಗಳೂರು ನಗರಕ್ಕೆ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಸಿಎಂ ಪುತ್ರ ವಿಜಯೇಂದ್ರ ಅವರ ಕಾರು ತಡೆದು ತಾವು ಖರೀದಿ ಮಾಡಿದ ಜಮೀನು ವಿಚಾರ ಸಂಬಂಧ ತರೀಕೆರೆ ಶಾಸಕ ಸುರೇಶ್ ಬೆಂಬಲದೊಂದಿಗೆ ಭೂಮಿಯ ಮಾಲಕರು ಕಿರುಕುಳ ನೀಡುತ್ತಿದ್ದಾರೆ, ತನ್ನ ಕುಟುಂಬಕ್ಕೆ ನ್ಯಾಯ ನೀಡಬೇಕೆಂದು ಅಂಗಲಾಚಿದ್ದ ಸುದ್ದಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಕಾರಣಕ್ಕೆ ಪ್ರಸನ್ನ ಪತ್ನಿ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.







