ಬಾಂಗ್ಲಾ: ರೊಹಿಂಗ್ಯಾ ನಿರಾಶ್ರಿತರ ಶಿಬಿರದಲ್ಲಿ ಭಾರೀ ಬೆಂಕಿ; ಕನಿಷ್ಠ 3 ಸಾವು

ಫೊಟೊ ಕೃಪೆ: twitter.com
ಕಾಕ್ಸ್ಬಝಾರ್ (ಬಾಂಗ್ಲಾದೇಶ), ಮಾ. 22: ದಕ್ಷಿಣ ಬಾಂಗ್ಲಾದೇಶದಲ್ಲಿರುವ ರೊಹಿಂಗ್ಯಾ ನಿರಾಶ್ರಿತ ಶಿಬಿರವೊಂದರಲ್ಲಿ ಸೋಮವಾರ ಭಾರೀ ಬೆಂಕಿ ಅಪಘಾತ ಸಂಭವಿಸಿದೆ. ದುರಂತದಲ್ಲಿ ನೂರಾರು ಗುಡಿಸಲುಗಳು ಸುಟ್ಟುಹೋಗಿವೆ.
ದುರಂತದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾಕ್ಸ್ಬಝಾರ್ನ ಬಲುಖಲಿ ಒಂದನೇ ಶಿಬಿರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ದಟ್ಟ ಹೊಗೆ ಆಕಾಶವನ್ನು ವ್ಯಾಪಿಸಿದೆ. ಸೋಮವಾರ ಅಪರಾಹ್ನ 3:30ರ ವೇಳೆಗೆ ಬೆಂಕಿ ಆರಂಭಗೊಂಡಿತು ಎಂದು ಸ್ಥಳೀಯರು ತಿಳಿಸಿದರು.
‘‘700ಕ್ಕೂ ಅಧಿಕ ಗುಡಿಸಲುಗಳು ಸುಟ್ಟು ಹೋಗಿವೆ ಹಾಗೂ ಬೆಂಕಿ ಬಹುತೇಕ ನಿಯಂತ್ರಣ ತಪ್ಪಿ ಉರಿಯುತ್ತಿದೆ’’ ಎಂದು ರೊಹಿಂಗ್ಯಾ ಸಮುದಾಯದ ನಾಯಕ ಮಯ್ಯು ಖಾನ್ ಹೇಳಿದ್ದಾರೆ.
ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ಸುಮಾರು 10 ಲಕ್ಷ ರೊಹಿಂಗ್ಯಾ ನಿರಾಶ್ರಿತರು ವಾಸಿಸುತ್ತಿದ್ದಾರೆ. ಅವರು 2017ರಲ್ಲಿ ಮ್ಯಾನ್ಮಾರ್ನ ರಖಿನ್ ರಾಜ್ಯದಲ್ಲಿ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಬೆದರಿ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದವರು ಎಂದು ತಿಳಿದು ಬಂದಿದೆ.





