ಕೆಎಸ್‍ಆರ್ಪಿ ನೇಮಕಾತಿ: ಸಿಕ್ಕಿಬಿದ್ದ ನಕಲಿ ಅಭ್ಯರ್ಥಿಗಳು
ಬೆಂಗಳೂರು, ಮಾ.22: ರಾಜ್ಯ ಮೀಸಲು ಪೊಲೀಸ್ ಪಡೆ(ಕೆಎಸ್‍ಆರ್ಪಿ) ನೇಮಕಾತಿಗಾಗಿ ನಡೆದ ದೈಹಿಕ ಪರೀಕ್ಷೆ ಸಂದರ್ಭದಲ್ಲಿ ಅಸಲಿ ಅಭ್ಯರ್ಥಿಗಳ ಪರವಾಗಿ ಹಾಜರಾಗಿದ್ದ ಮೂವರು ನಕಲಿ ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದು, ಮಡಿವಾಳ ಹಾಗೂ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಭ್ಯರ್ಥಿ ಮಲ್ಲಯ್ಯ ಪೂಜಾರಿ ಎಂಬುವರ ಪರವಾಗಿ ಸೈಯದ್ ಚಿಮ್ಮಡ್, ಜಗದೀಶ್ ದೊಡ್ಡಗೌಡರ ಪರವಾಗಿ ಪ್ರಕಾಶ್ ಆಡಿನ್ ಹಾಗೂ ನಾಗಪ್ಪ ಪರವಾಗಿ ಮಲ್ಲಿಕಾರ್ಜುನ್ ಎಂಬವರು ಪರೀಕ್ಷೆಗೆ ಹಾಜರಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಸಲಿ ಅಭ್ಯರ್ಥಿಗಳ ಪರವಾಗಿ ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ವೇಳೆ ಮೂವರ ಅಕ್ರಮ ಬಯಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಮೂವರು ನಕಲಿ ಅಭ್ಯರ್ಥಿಗಳು ಹಾಗೂ ಮೂವರು ಅಸಲಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ಇನ್ನು, ಆರೋಪಿಗಳು ಈ ಕೃತ್ಯವೆಸಗಲು ಲಕ್ಷಾಂತರ ರೂಪಾಯಿ ಪಡೆದಿರುವ ಆರೋಪ ಇದ್ದು, ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.







