ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿ ಶೇ.74ಕ್ಕೆ ಏರಿಕೆ: ಮಸೂದೆಗೆ ಲೋಕಸಭೆಯ ಅಂಗೀಕಾರ

ಹೊಸದಿಲ್ಲಿ,ಮಾ.22: ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯ ಮಿತಿಯನ್ನು ಶೇ.74ಕ್ಕೆ ಹೆಚ್ಚಿಸುವ ಮಸೂದೆಗೆ ಲೋಕಸಭೆಯು ಸೋಮವಾರ ಧ್ವನಿಮತದೊಂದಿಗೆ ಅಂಗೀಕಾರ ನೀಡುವುದರೊಂದಿಗೆ ಈ ಪ್ರಸ್ತಾವಕ್ಕೆ ಸಂಸತ್ತಿನ ಒಪ್ಪಿಗೆ ದೊರಕಿದೆ. ವಿಮಾ (ತಿದ್ದುಪಡಿ) ಮಸೂದೆ,2021 ಕಳೆದ ವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತ್ತು.
ಸದನದಲ್ಲಿ ಮಸೂದೆಯನ್ನು ಮಂಡಿಸಿದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು,ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಹೆಚ್ಚಿಸುವುದರಿಂದ ವಿಮಾ ಕಂಪೆನಿಗಳಿಗೆ ಹೆಚ್ಚುವರಿ ಹಣಕಾಸನ್ನು ಕ್ರೋಢೀಕರಿಸಲು ಮತ್ತು ಹಣಕಾಸು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನೆರವಾಗುತ್ತದೆ. ಸಾರ್ವಜನಿಕ ಕ್ಷೇತ್ರದ ವಿಮಾ ಕಂಪನಿಗಳಿಗೆ ಸರಕಾರವು ಹಣಕಾಸು ನೆರವನ್ನು ಒದಗಿಸುತ್ತದೆ,ಆದರೆ ಖಾಸಗಿ ಕಂಪನಿಗಳು ಸ್ವಂತ ಸಾಮರ್ಥ್ಯದಲ್ಲಿ ಹಣಕಾಸನ್ನು ಕ್ರೋಢೀಕರಿಸಬೇಕಾಗುತ್ತದೆ ಎಂದು ಹೇಳಿದರು.
ವಿಮಾ ಕಂಪನಿಗಳು ಸಾಲಪಾವತಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಅಭಿಪ್ರಾಯಿಸಿದ ಸೀತಾರಾಮನ್, ಬೆಳವಣಿಗೆಗೆ ಅಗತ್ಯವಾದ ಹಣಕಾಸು ಲಭಿಸದಿದ್ದರೆ ಒತ್ತಡದ ಸ್ಥಿತಿ ಸೃಷ್ಟಿಯಾಗುತ್ತದೆ. ಇಂತಹ ಸ್ಥಿತಿಯನ್ನು ನಿವಾರಿಸಬೇಕಿದ್ದರೆ ನಾವು ಎಫ್‌ಡಿಐ ಮಿತಿಯನ್ನು ಹೆಚ್ಚಿಸಬೇಕು ಎಂದರು.
ಕೋವಿಡ್-19 ಸಾಂಕ್ರಾಮಿಕವು ವಿಮಾ ಕಂಪನಿಗಳ ಸಮಸ್ಯೆಗಳನ್ನು ಹೆಚ್ಚಿಸಿದೆ ಎಂದ ಅವರು,ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ದ ಶಿಫಾರಸುಗಳಂತೆ ಎಫ್‌ಡಿಐ ಮಿತಿಯನ್ನು ಹೆಚ್ಚಿಸಲಾಗುತ್ತಿದೆ ಎಂದರು.
ಸರಕಾರವು 2015ರಲ್ಲಿ ಮಿತಿಯನ್ನು ಶೇ.26ರಿಂದ ಶೇ.49ಕ್ಕೆ ಹೆಚ್ಚಿಸಿದ ಬಳಿಕ ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಹರಿವು ಗಣನೀಯವಾಗಿ ಏರಿಕೆಯಾಗಿದೆ ಎಂದ ಸೀತಾರಾಮನ್,ಆಗಿನಿಂದ 26,000 ಕೋ.ರೂ.ಎಫ್‌ಡಿಐ ವಿಮಾ ಕ್ಷೇತ್ರದಲ್ಲಿ ಹೂಡಿಕೆಯಾಗಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಈ ಕೇತ್ರದಲ್ಲಿ ನಿರ್ವಹಣೆಯ ಅಡಿಯಲ್ಲಿರುವ ಆಸ್ತಿಗಳ ಮೌಲ್ಯ ಶೇ.74ರಷ್ಟು ಬೆಳವಣಿಗೆಯಾಗಿದೆ ಎಂದು ತಿಳಿಸಿದರು.







