ಎಲ್ಲ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲು ಪ್ರಧಾನಿ, ಕೇಂದ್ರ ಸಚಿವರಿಗೆ ಎಡಿಟರ್ಸ್ ಗಿಲ್ಡ್ ಪತ್ರ
ಡಿಜಿಟಲ್ ಮಾಧ್ಯಮ ನಿಯಮಗಳು

ಹೊಸದಿಲ್ಲಿ,ಮಾ.22: ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಲು ನೂತನ ನಿಯಮಗಳ ಜಾರಿಯನ್ನು ತಡೆಹಿಡಿಯುವಂತೆ ಆಗ್ರಹಿಸಿ ತಾನು ಪ್ರಧಾನಿ ನರೇಂದ್ರ ಮೋದಿ,ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರಗಳನ್ನು ಬರೆದಿರುವುದಾಗಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಸೋಮವಾರ ತಿಳಿಸಿದೆ. ಈ ವಿಷಯದಲ್ಲಿ ಎಲ್ಲ ಪಾಲುದಾರರೊಂದಿಗೆ ಸಮಾಲೋಚಿಸುವಂತೆ ಅದು ಸರಕಾರವನ್ನು ಆಗ್ರಹಿಸಿದೆ.
ನೂತನ ನಿಯಮಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ತಾನು ಮಾ.6ರಂದು ಈ ಪತ್ರಗಳನ್ನು ಬರೆದಿದ್ದು,ಆದರೆ ಸರಕಾರವು ಈವರೆಗೆ ಉತ್ತರಿಸಿಲ್ಲ ಎಂದು ಇಜಿಐ ಹೇಳಿದೆ.
ನೂತನ ನಿಯಮಗಳು ಡಿಜಿಟಲ್ ಮಾಧ್ಯಮಗಳನ್ನು ಮೂಲಭೂತವಾಗಿ ಬದಲಿಸುತ್ತವೆ ಮತ್ತು ಅವುಗಳ ಮೇಲೆ ನ್ಯಾಯಯುತವಲ್ಲದ ನಿರ್ಬಂಧಗಳನ್ನು ಹೇರುತ್ತವೆ ಎಂದು ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ಇಜಿಐ,ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚಿಸದೆ ಈ ನಿಯಮಗಳನ್ನು ತರಲಾಗಿದೆ ಮತ್ತು ಇದು ಭಾರತದಲ್ಲಿ ಪತ್ರಿಕಾ ಸ್ವಾತಂತ್ರವನ್ನು ಹತ್ತಿಕ್ಕಲಾಗುತ್ತಿದೆ ಎಂಬ ಕಳವಳವನ್ನು ಹೆಚ್ಚಿಸಿದೆ. ಡಿಜಿಟಲ್ ಮಾಧ್ಯಮಗಳನ್ನು ನಿಯಂತ್ರಿಸಲು ತುಂಬ ತೊಡಕಿನ ಮೂರು ಸ್ತರಗಳ ವ್ಯವಸ್ಥೆಯು ಈ ನಿಯಮಗಳಲ್ಲಿಯ ಅತ್ಯಂತ ಆತಂಕಕಾರಿ ಅಂಶವಾಗಿದೆ ಎಂದು ಹೇಳಿದೆ.
ವಿವಿಧ ಇತರ ನಿಯಮಗಳೂ ಮಾಧ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಲಿವೆ ಎಂದು ಪತ್ರದಲ್ಲಿ ಹೇಳಿರುವ ಇಜಿಐ,ಭಾರತದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸುವತ್ತ ನಿಮ್ಮ ಸಾರ್ವಜನಿಕ ಬದ್ಧತೆಯನ್ನು ಪರಿಗಣಿಸಿ,ಈ ನಿಯಮಗಳನ್ನು ಹಿಂದೆಗೆದುಕೊಳ್ಳುವಲ್ಲಿ ಮತ್ತು ಎಲ್ಲ ಪಾಲುದಾರರೊಂದಿಗೆ ಅರ್ಥಪೂರ್ಣ ಸಮಾಲೋಚನೆಗಳು ನಡೆಯುವಂತಾಗಲು ನಿಮ್ಮ ತುರ್ತು ಹಸ್ತಕ್ಷೇಪವನ್ನು ಆಗ್ರಹಿಸುತ್ತೇವೆ ಎಂದು ತಿಳಿಸಿದೆ.
ಜಾವಡೇಕರ ಮತ್ತು ಪ್ರಸಾದ ಅವರಿಗೆ ಬರೆದಿರುವ ಪತ್ರಗಳಲ್ಲಿ ಡಿಜಿಟಲ್ ಯುಗವು ಸೃಷ್ಟಿಸಿರುವ ಸವಾಲುಗಳನ್ನು ಮತ್ತು ಸ್ವನಿಯಂತ್ರಣದ ಅಗತ್ಯವನ್ನು ಇಜಿಐ ಒಪ್ಪಿಕೊಂಡಿದೆಯಾದರೂ,ಸರಕಾರದ ನೂತನ ನಿಯಮಗಳ ಬಗ್ಗೆ ತೀವ್ರ ಕಳವಳಗಳನ್ನು ವ್ಯಕ್ತಪಡಿಸಿದೆ.







