ಮನ್ಸುಖ್ ಹಿರೇನ್ ಸಾವಿನ ಪ್ರಕರಣ: ಗುಜರಾತ್ ನಿಂದ ಸಿಮ್ ಕಾರ್ಡ್ ಪೂರೈಕೆದಾರನನ್ನು ಬಂಧಿಸಿದ ಎಟಿಎಸ್

ಮುಂಬೈ: ಮನ್ಸುಖ್ ಹಿರೇನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್ )ಗುಜರಾತ್ ಮೂಲದ ವ್ಯಕ್ತಿಯನ್ನು ಸೋಮವಾರ ಬಂಧಿಸಿದೆ.
ಈ ಪ್ರಕರಣದಲ್ಲಿ ಎಟಿಎಸ್ ನಿಂದ ರವಿವಾರ ಬಂಧಿಸಲ್ಪಟ್ಟಿರುವ ಬುಕ್ಕಿ ನರೇಶ್ ಧಾರೆ ಅವರಿಗೆ ಸೋಮವಾರ ಬಂಧಿಸಲ್ಪಟ್ಟಿರುವ ವ್ಯಕ್ತಿ ಗುಜರಾತ್ ನಿಂದ ಒಟ್ಟು 14 ಸಿಮ್ ಕಾರ್ಡ್ ಗಳನ್ನು ಸರಬರಾಜು ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಎಟಿಎಸ್ ಬಂಧಿಸಿರುವ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ.
ಎಟಿಎಸ್ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಕಾನ್ ಸ್ಟೇಬಲ್ ವಿನಾಯಕ ಶಿಂಧೆ(55) ಹಾಗೂ ಬುಕ್ಕಿ ನರೇಶ್ ಧಾರೆ(31)ಅವರನ್ನು ಮನ್ಸುಖ್ ಹಿರೇನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ರವಿವಾರ ಬಂಧಿಸಿತ್ತು.
ಗ್ಯಾಂಗ್ ಸ್ಟರ್ ಲಖನ್ ಬೈಯ್ಯ ಎನ್ ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಾಯಕ ಶಿಂಧೆ ಪರೋಲ್ ನಲ್ಲಿದ್ದ. ರಾಮನಾರಾಯಣ ಗುಪ್ತಾ ಅಲಿಯಾಸ್ ಲಖನ್ ಭಯ್ಯಾನನ್ನು 2006ರಲ್ಲಿ ನಕಲಿ ಎನ್ ಕೌಂಟರ್ ನಲ್ಲಿ ಸಾಯಿಸಲಾಗಿತ್ತು.
ಮಹಾರಾಷ್ಟ್ರ ಎಟಿಎಸ್ ಪ್ರಕಾರ, ಸಚಿನ್ ವಾಝೆ ಹಾಗೂ ವಿನಾಯಕ ಶಿಂಧೆಗೆ ಬುಕ್ಕಿ ನರೇಶ್ ಗೋರ್ 5 ಸಿಮ್ ಕಾರ್ಡ್ ಗಳನ್ನು ನೀಡಿದ್ದ. ಈ ಎಲ್ಲ ಸಿಮ್ ಕಾರ್ಡ್ ಗಳು ಅಪರಿಚಿತ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿತವಾಗಿದೆ. ಅಪರಾಧದಲ್ಲಿ ಇದೇ ಕಾರ್ಡ್ ಗಳನ್ನು ಬಳಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಎನ್ ಕೌಂಟರ್ ಪ್ರಕರಣದಲ್ಲಿ ಪರೋಲ್ ಪಡೆದಿದ್ದ ವಿನಾಯಕ್ ಶಿಂಧೆ ಅವರು ಅಕ್ರಮ ಚಟುವಟಿಕೆಗಳಿಗೆ ಸಚಿನ್ ಗೆ ಹಲವು ಬಾರಿ ಸಹಾಯ ಮಾಡಿದ್ದ ಎನ್ನಲಾಗಿದೆ.
ಮಾರ್ಚ್ 5ರಂದು ಥಾಣೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಮನ್ಸುಖ್ ಹಿರೇನ್ ಅವರ ಮಾಲಕತ್ವದ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ಮುಂಬೈನಲ್ಲಿ ಫೆಬ್ರವರಿ 25ರಂದು ಮಿಲಿಯನೇರ್ ಮುಕೇಶ್ ಅಂಬಾನಿ ಮನೆಯ ಎದುರು ಕಾಣಿಸಿಕೊಂಡಿತ್ತು.







