ಮೀಸಲಾತಿ ನೀತಿ ಪಾಲಿಸಲು ಐಐಟಿಗಳಿಗೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಹೊಸದಿಲ್ಲಿ, ಮಾ. 22: ಸಂಶೋಧನಾ ಪದವಿ ಕೋರ್ಸ್‌ಗೆ ಅಭ್ಯರ್ಥಿಗಳಿಗೆ ಪ್ರವೇಶ ನೀಡುವಾಗ ಹಾಗೂ ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಸರಕಾರ ನಿಗದಿಪಡಿಸಿರುವ ಮೀಸಲಾತಿ ನೀತಿಯನ್ನು ಪಾಲಿಸುವಂತೆ 23 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ ಎಂದು ‘ಲೈವ್‌ಲಾ’ ವರದಿ ಮಾಡಿದೆ.
ಈ ಎಲ್ಲ ಐಐಟಿಗಳು ವಿದ್ಯಾರ್ಥಿಗಳ ಪ್ರವೇಶ ಮತ್ತು ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗೆ 15 ಶೇಕಡ, ಪರಿಶಿಷ್ಟ ಪಂಗಡಕ್ಕೆ 7.5 ಶೇಕಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ 27 ಶೇಕಡ ಮೀಸಲಾತಿ ನೀಡಬೇಕೆನ್ನುವ ನೀತಿಯನ್ನು ಪಾಲಿಸುತ್ತಿಲ್ಲ ಎಂದು ದೂರುದಾರರಾಗಿರುವ ಜಿಯೋಥರ್ಮಲ್ ಎನರ್ಜಿ ರಿಸರ್ಚರ್ ಸಚ್ಚಿದಾನಂದ ಪಾಂಡೆ ಆರೋಪಿಸಿದ್ದಾರೆ. ಹಾಗಾಗಿ, ಐಐಟಿಗಳ ಈ ಕ್ರಮವು ‘‘ಅಸಾಂವಿಧಾನಿಕ, ಕಾನೂನುಬಾಹಿರ ಮತ್ತು ಸ್ವೇಚ್ಛಾಚಾರದಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.
2019 ನವೆಂಬರ್‌ನಲ್ಲಿ, 23 ಐಐಟಿಗಳ ಎಲ್ಲ ವಿಭಾಗಗಳ ಎಲ್ಲ ಬೋಧಕ ಹುದ್ದೆಗಳಿಗೆ (ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಎರಡೂ ಹುದ್ದೆಗಳಲ್ಲಿ) ಕೇಂದ್ರ ಸರಕಾರವು ಮೀಸಲಾತಿಯನ್ನು ವಿಸ್ತರಿಸಿತ್ತು. ಅದಕ್ಕೂ ಮೊದಲು, 2018 ಜೂನ್‌ನಲ್ಲಿ ಇನ್ನೊಂದು ಆದೇಶ ನೀಡಿದ್ದ ಕೇಂದ್ರ ಸರಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಸಹಾಯಕ ಪ್ರೊಫೆಸರ್ ಮಟ್ಟದ ಬೋಧಕ ಹುದ್ದೆಗಳು ಮತ್ತು ಹ್ಯುಮ್ಯಾನಿಟಿ ಮತ್ತು ಮ್ಯಾನೇಜ್‌ಮೆಂಟ್ ವಿಭಾಗಗಳ ಎಲ್ಲ ಮಟ್ಟಗಳಲ್ಲಿ (ಸಹಾಯಕ ಪ್ರೊಫೆಸರ್ ಮತ್ತು ಪ್ರೊಫೆಸರ್) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸ್ಥಾನಗಳನ್ನು ಕಾದಿರಿಸುವಂತೆ ಐಐಟಿಗಳಿಗೆ ಸೂಚಿಸಿತ್ತು.
ಕಳೆದ ಐದು ವರ್ಷಗಳ ಅವಧಿಯಲ್ಲಿ ಐಐಟಿಗಳು ರಿಸರ್ಚ್ ಸ್ಕಾಲರ್‌ಗಳ ವಿಭಾಗದಲ್ಲಿ ಮಾತ್ರ ಪರಿಶಿಷ್ಟ ಜಾತಿಗಳಿಗೆ 9.1 ಶೇಕಡ, ಪರಿಶಿಷ್ಟ ಪಂಗಡಗಳಿಗೆ 2.1 ಶೇಕಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ 23.2 ಶೇಕಡ ಮೀಸಲಾತಿ ನೀಡಿವೆ ಎಂದು ದೂರುದಾರರು ಹೇಳಿದ್ದಾರೆ. ಇದು ಕೂಡ ಆದೇಶಿತ ಮಿತಿಗಿಂತ ತೀರಾ ಕೆಳಗಿವೆ ಎಂದು ಅವರು ದೂರಿದ್ದಾರೆ.
2015ರಿಂದ 2019ರವರೆಗೆ, ಐಐಟಿ ಬಾಂಬೆಯು 26 ವಿಭಾಗಗಳು ಮತ್ತು ಕೇಂದ್ರಗಳ ಪೈಕಿ 11ರಲ್ಲಿ ಪರಿಶಿಷ್ಟ ಪಂಗಡದ ಒಂದೇ ಒಂದು ಅಭ್ಯರ್ಥಿಯನ್ನು ಪಿಎಚ್‌ಡಿ ಸ್ಕಾಲರ್‌ಗೆ ತೆಗೆದುಕೊಂಡಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.







