ಹೈಕಾಡಿ ಮಸೀದಿಯಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ

ಬ್ರಹ್ಮಾವರ, ಮಾ.23: ಹೈಕಾಡಿ ಜಾಮೀಯ ಮಸೀದಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯ ಕ್ರಮ ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಮಸೀದಿಯ ಅಧ್ಯಕ್ಷ ಅಸ್ಲಂ ಹೈಕಾಡಿ ಮಾತನಾಡಿ, ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವಲ್ಲಿ ಪೋಷಕರು ಎಡವಿದ್ದಲ್ಲಿ ಇಡೀ ಸಮಾಜವೇ ಕಲುಷಿತಗೊಳ್ಳುತ್ತದೆ. ಆದುದರಿಂದ ಪೋಷಕರು ತಮ್ಮ ಜವಾಬ್ದಾರಿ ಯನ್ನರಿತು ಮಕ್ಕಳನ್ನು ತರಬೆೀತಿಗೊಳಿಸಬೇಕು ಎಂದು ಹೇಳಿದರು.
ಈ ಸಂದರ್ಭ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯಲಕ್ಷ್ಮೀ, ಉಪಾಧ್ಯಕ್ಷ ದಿವಾಕರ ಗಾಣಿಗ, ಸದಸ್ಯರಾದ ಸಂತೋಷ ಶೆಟ್ಟಿ ಕೊಣ್ಣೆಮಕ್ಕಿ, ಶಮೀನಾ ಬಾನು ಹಾಗೂ ಆರತಿ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು. ಎಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ರುಹೀನಾ, ಅಶ್ಫಾಕ್, ರಶ್ವತ್ ಹಾಗೂ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಅಫ್ರಾ ರಫೀಕ್ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮೌಲಾನಾ ಅಫಾಕ್, ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಸಮ್ಮದ್, ಖಾಜಿ ಶಬ್ಬೀರ್, ಪ್ರಧಾನ ಕಾರ್ಯದರ್ಶಿ ಜಾಫರ್ ಸಾಧಿಕ್, ಕೋಶಾಧಿಕಾರಿ ಮನ್ಸೂರ್, ಜೊತೆ ಕಾರ್ಯದರ್ಶಿ ಅಬ್ದುಲ್ ಹಮೀದ್, ಕಾರ್ಯಕ್ರಮದ ಸಂಯೋಜಕ ಸಜೀರ್ ಅಹ್ಮದ್ ಉಪಸ್ಥಿತರಿದ್ದರು. ಅಬ್ದುಲ್ ಸಮ್ಮದ್ ಸ್ವಾಗತಿಸಿ, ಜಹೀರ್ ಅಬ್ಬಾಸ್ ವಂದಿಸಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.





