ಉಡುಪಿ: ಬಡ ದಲಿತ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಜಮಾಅತೆ ಇಸ್ಲಾಮಿ ಹಿಂದ್

ಉಡುಪಿ, ಮಾ.23: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಬಡ ದಲಿತ ಕುಟುಂಬಕ್ಕೆ ನಿರ್ಮಿಸಿ ಕೊಡಲಾದ ಹೊಸ ಮನೆಯನ್ನು ಮಂಗಳವಾರ ಹಸ್ತಾಂತರಿಸಲಾಯಿತು.
ಸೂರಿಲ್ಲದವರಿಗೆ ಸೂರು ಒದಗಿಸುವ ಮಹತ್ವದ ಯೋಜನೆಯಡಿಯಲ್ಲಿ 16 ನೇ ಮನೆಯನ್ನು ತೋನ್ಸೆ ಗ್ರಾಪಂ ವ್ಯಾಪ್ತಿಯ ದಲಿತ ಕುಟುಂಬಕ್ಕೆ ಕೀಲಿ ಕೈಯನ್ನು ಜಮಾಅತೆ ಇಸ್ಲಾಮಿ ಹಿಂದ್’ನ ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿ ಹಸ್ತಾಂತರಿಸಿದರು.
ದಸಂಸ ಮುಖಂಡ ಶ್ಯಾಮರಾಜ್ ಬಿರ್ತಿ ಮಾತನಾಡಿ, ಮನೆಯಿಲ್ಲದೆ ಸಂಕಷ್ಟ ಪಡುತ್ತಿರುವ ಲಕ್ಷಾಂತರ ಮಂದಿ ನಮ್ಮ ದೇಶದಲ್ಲಿದ್ದಾರೆ. ಸೂರಿಲ್ಲದೆ ಕೊಳವೆಗಳಲ್ಲಿ ವಾಸಿಸುವ ಹಲವು ಜನರನ್ನು ಕಾಣಬಹುದಾಗಿದೆ. ಇಂತಹ ಸಂದರ್ಭದಲ್ಲಿ ಜಾತಿ, ಮತದ ಭೇದಯಿಲ್ಲದೆ ಜಮಾಅತೆ ಇಸ್ಲಾಮಿ ಹಿಂದ್’ನ ವತಿಯಿಂದ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆಯೆಂದರು.
ದಸಂಸ ಮುಖಂಡ ಮಂಜುನಾಥ್ ಬಾಳ್ಕುದ್ರು, ತಾಪಂ ಸದಸ್ಯೆ ಸುಲೋಚನ ಸತೀಶ್, ಗ್ರಾಪಂ ಸದಸ್ಯ ವಿಜಯ್ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಲತಾ, ಸದಸ್ಯರಾದ ಸುಝಾನ್ ಡಿಸೋಜ, ಮಮ್ತಾಝ್, ಜಮೀಲ, ವತ್ಸಲ, ಡಾ.ಫಹೀಮ್ ಸಂಧ್ಯಾ, ಕುಸುಮ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷ ಶಬ್ಬೀರ್ ಮಲ್ಪೆ ಉಪಸ್ಥಿತರಿದ್ದರು.





