ಮುಖೇಶ್ ಅಂಬಾನಿ ನಿವಾಸದ ಹೊರಗೆ ಸ್ಫೋಟಕ ಪತ್ತೆ ಪ್ರಕರಣ: ಹಣ ಅಕ್ರಮ ವರ್ಗಾವಣೆ ತನಿಖೆ ಆರಂಭಿಸಲಿರುವ ಈಡಿ

ಮುಂಬೈ, ಮಾ. 23: ಮುಂಬೈಯಲ್ಲಿರುವ ಮುಖೇಶ್ ಅಂಬಾನಿ ಅವರ ನಿವಾಸ ‘ಆ್ಯಂಟಿಲಾ’ದ ಹೊರಗೆ ಕಳೆದ ತಿಂಗಳು ಸ್ಫೋಟಕ ತುಂಬಿದ್ದ ಕಾರು ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಕೂಡ ದಾಖಲಿಸಲಿದೆ.
ಹಣಕಾಸು ವಂಚನೆ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲಿಸಿದ ಪ್ರಥಮ ಮಾಹಿತಿ ವರದಿಯನ್ನು ಪರಿಗಣನೆಗೆ ತೆಗೆದುಕೊಂಡಿದೆ. ಕೇಂದ್ರ ತನಿಖಾ ಸಂಸ್ಥೆ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವ ಮುನ್ನ ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದಿಂದ ಕೂಡ ಜಾರಿ ನಿರ್ದೇಶನಾಲಯ ವಿವರ ಕೋರಿದೆ. ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಥಾಣೆಯ ಉದ್ಯಮಿ ಮನ್‌ಸುಖ್ ಹಿರೇನ್ ಅವರ ಸಾವಿನ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾಣೆಯ ತನಿಖೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಲಿದೆ. ಮನ್‌ಸುಖ್ ಹಿರೇನ್ ಅವರ ಕಳವುಗೈಯಲಾದ ಎಸ್‌ಯುವಿ ಕಾರು ಮುಖೇಶ್ ಅಂಬಾನಿ ಅವರ ನಿವಾಸದ ಹೊರಗೆ ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆಯಾತ್ತು. ಒಂದು ದಿನದ ಬಳಿಕ ಕ್ರೀಕ್‌ನಲ್ಲಿ ಮನ್‌ಸುಖ್ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು.
ವೋಲ್ವೊ ಕಾರು ವಶ
ಮನ್‌ಸುಖ್ ಹಿರೇನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಡಾಮನ್‌ನಿಂದ ಅತ್ಯಾಧುನಿಕ ಕಾರೊಂದನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿರುವ ವೋಲ್ವೋ ಕಾರನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ. ಈ ಕಾರಿನ ಮಾಲಕರು ಯಾರು ಎಂದು ಇದುವರೆಗೆ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







