ಉತ್ತರಾಖಂಡ ಹಿಮಪ್ರವಾಹದಲ್ಲಿ ನಾಪತ್ತೆಯಾದ 130 ಮಂದಿ ಇದುವರೆಗೆ ಪತ್ತೆಯಾಗಿಲ್ಲ: ಸರಕಾರ

ಹೊಸದಿಲ್ಲಿ, ಮಾ. 23: ಎಪ್ಪತ್ನಾಲ್ಕು ಜನರ ಸಾವಿಗೆ ಕಾರಣವಾದ ಉತ್ತರಾಖಂಡದಲ್ಲಿ ಫೆಬ್ರವರಿ 7ರಂದು ಸಂಭವಿಸಿದ ಹಿಮ ಸ್ಫೋಟದಿಂದ ಸೃಷ್ಟಿಯಾದ ಪ್ರವಾಹದಲ್ಲಿ 130ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಮಂಗಳವಾರ ಲೋಕಸಭೆಗೆ ತಿಳಿಸಲಾಯಿತು.
ಋಷಿಗಂಗಾ ಹಾಗೂ ದೌಳಿಗಂಗಾದಲ್ಲಿ ಪ್ರವಾಹ ಸೃಷ್ಟಿಯಾಗಿರುವುದರ ಬಗ್ಗೆ ಅಧ್ಯಯನ ನಡೆಸಲು ಹಾಗೂ ಇಂತಹ ದುರ್ಘಟನೆಗಳನ್ನು ತಡೆಯಲು ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪರಿಹಾರ ಸೂಚಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಂಸ್ಥೆಗಳ, ಸಂಘಟನೆಗಳ ತಜ್ಞರ ಜಂಟಿ ಅಧ್ಯಯನ ತಂಡವೊಂದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ರೂಪಿಸಿದೆ ಎಂದು ಕೇಂದ್ರದ ಸಹಾಯಕ ಸಚಿವ ನಿತ್ಯಾನಂದ ರಾಯ್ ಹೇಳಿದ್ದಾರೆ.
ಹಿಮನದಿಗಳು ಹಾಗೂ ಅದರ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರೂಪಿಸಲಾಗಿದೆ ಎಂದು ಉತ್ತರಾಖಂಡ ಸರಕಾರ ಹೇಳಿದೆ. ‘‘ಉತ್ತರಾಖಂಡ ರಾಜ್ಯ ಸರಕಾರದಿಂದ ಸ್ವೀಕರಿಸಲಾದ ಮಾಹಿತಿಯ ಪ್ರಕಾರ, ಇದುವರೆಗೆ 70 ಮೃತದೇಹಗಳು ಪತ್ತೆಯಾಗಿವೆ. ನಾಪತ್ತೆಯಾದ 130 ಮಂದಿ ಇದುವರೆಗೆ ಪತ್ತೆಯಾಗಿಲ್ಲ. ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಪ್ರತಿ ಕುಟುಂಬಕ್ಕೆ ರಾಜ್ಯ ಸರಕಾರ ತಲಾ 4 ಲಕ್ಷ ರೂಪಾಯಿ ಪರಿಹಾರ ಧನ ಘೋಷಿಸಿದೆ’’ ಎಂದು ರಾಯ್ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದರು.







