ಮಾಸ್ಕ್ ಧರಿಸದ ವಿರುದ್ಧ ಉಡುಪಿ ಜಿಲ್ಲಾಧಿಕಾರಿಯಿಂದ ಕಾರ್ಯಾಚರಣೆ
ಉಡುಪಿ ನಗರದಲ್ಲಿ ಸಂಚಾರ, ಬಸ್, ಅಂಗಡಿ, ಸಾರ್ವಜನಿಕರಿಗೆ ದಂಡ

ಉಡುಪಿ, ಮಾ.23: ಜಿಲ್ಲೆಯಾದ್ಯಂತ ಕೊರೋನಾ ಪ್ರಕರಣಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸುವ ವರ ವಿರುದ್ಧ ಮಂಗಳವಾರ ಸಂಜೆ ಕಾರ್ಯಾಚರಣೆಗೆ ಇಳಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಿಗಳ ತಂಡ, ಬಸ್ ಚಾಲಕರು, ಪ್ರಯಾಣಿಕರು, ಅಂಗಡಿ ಮಾಲಕರು, ಸಾರ್ವಜನಿಕರಿಂದ ದಂಡ ವಸೂಲಿ ಮಾಡಿದರು.
ನಗರದ ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಅಂಜುಮಾನ್ ಮಸೀದಿ ರಸ್ತೆ, ಉಡುಪಿ ಜಾಮೀಯ ಮಸೀದಿ ರಸ್ತೆ, ಸಿಟಿ ಸೆಂಟರ್ ರಸ್ತೆಗಳಲ್ಲಿ ನಡೆದುಕೊಂಡೇ ಸಾಗಿದ ಡಿಸಿ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದರ ಜೊತೆಗೆ ಮುಂದೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಇದೇ ವೇಳೆ ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದ ಮಹಿಳೆಯರು, ಯುವಕರನ್ನು ಕರೆದು ಕೊರೋನಾ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಜಾಗೃತಿ ಮೂಡಿಸಿದರು.
ಮಾಸ್ಕ್ ಧರಿಸದೆ ಬಸ್ ಚಲಾಯಿಸುತ್ತಿದ್ದ ಚಾಲಕನನ್ನು ಕೆಳಗೆ ಇಳಿಸಿ ಕೊರೋನ ಪಾಠ ಮಾಡಿದ ಜಿಲ್ಲಾಧಿಕಾರಿ, ಚಾಲಕನಿಂದ ದಂಡ ವಸೂಲಿ ಮಾಡಲು ಸೂಚಿಸಿದರು. ನಂತರ ಬಸ್ ಏರಿದ ಡಿಸಿ, ಮಾಸ್ಕ್ ಧರಿಸದ ಪ್ರಯಾಣಿಕರಿಂದಲೂ ದಂಡ ವಸೂಲಿ ಮಾಡಿದರು.
ಮುಂದೆ ಅಂಗಡಿಗಳಿಗೆ ನುಗ್ಗಿದ ಅವರು, ಕೋವಿಡ್-19 ನಿಯಮ ಉಲ್ಲಂಘಿಸಿದ ವಾಚ್, ಬಟ್ಟೆ ಅಂಗಡಿ ಸೇರಿದಂತೆ ಒಟ್ಟು ನಾಲ್ಕು ಅಂಗಡಿ ಗಳಿಗೆ ತಲಾ 5000ರೂ. ದಂಡ ವಿಧಿಸಿ ಕಠಿಣ ಕ್ರಮ ಜರಗಿಸಿದರು. ಬಳಿಕ ಅವರು ಸಿಟಿ ಸೆಂಟರ್ ಮಾಲ್‌ಗೆ ತೆರಳಿ, ಅಲ್ಲಿನ ಅಂಗಡಿಗಳಲ್ಲಿ ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡದೆ ಮತ್ತು ಸ್ಯಾನಿಟೈಸರ್ ಬಳಕೆ ಮಾಡದ ದಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಡಾ.ಉದಯ ಶೆಟ್ಟಿ, ಡಿವೈಎಸ್ಪಿ ಸದಾನಂದ ನಾಯಕ್, ನಗರಸಭೆ ಅಧಿಕಾರಿ ಗಳಾದ ಮೋಹನ್‌ರಾಜ್, ಕರುಣಾಕರ್, ಧನಂಜಯ, ವೃತ್ತ ನಿರೀಕ್ಷಕ ಮಂಜು ನಾಥ್, ಪೊಲೀಸ್ ಉಪನಿರೀ ಕ್ಷಕರಾದ ಸಕ್ತಿವೇಲು, ಅಬ್ದುಲ್ ಖಾದರ್ ಮೊದಲಾದವರು ಹಾಜರಿದ್ದರು.
‘ಕಳೆದ ಒಂದು ವಾರಗಳಲ್ಲಿ ಸಾಕಷ್ಟು ಪ್ರಕರಣಗಳು ಕಂಡುಬರುತ್ತಿದೆ. ಜಿಲ್ಲೆಯಲ್ಲಿ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಎರಡು ಮೂರು ಬಾರಿ ಸಭೆ ಕರೆದು, ಮಾಸ್ಕ್, ಸ್ಯಾನಿಟೈಸರ್, ಸುರಕ್ಷಿತ ಅಂತರ ಕಾಪಾಡುವ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಲಾಗಿತ್ತು. ಇಂದು ಅದೇ ಕಾರಣಕ್ಕೆ ನಗರದಲ್ಲಿ ಮಾಸ್ಕ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಈ ಕಾರ್ಯಾಚರಣೆ ನಡೆಸಲಾಗಿದೆ. 4 ಅಂಗಡಿಗಳಿಗೆ ತಲಾ 5ಸಾವಿರ ರೂ. ದಂಡ ವಿಧಿಸಲಾಗಿದೆ. ಅದರ ಜೊತೆ ಮಾಸ್ಕ್ ಧರಿಸದ ಸಾರ್ವಜನಿಕರಿಂದಲೂ ದಂಡ ವಸೂಲಿ ಮಾಡಲಾಗಿದೆ'. -ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ








