ಲಂಕಾದ ಮಾನವಹಕ್ಕು ದಾಖಲೆ ಖಂಡಿಸಿ ನಿರ್ಣಯ ಕೈಗೊಂಡ ವಿಶ್ವಸಂಸ್ಥೆ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 23: ಸ್ವಿಟ್ಸರ್‌ಲ್ಯಾಂಡ್‌ನ ನಗರ ಜಿನೀವದಲ್ಲಿರುವ ವಿಶ್ವಸಂಸ್ಥೆಯ ಮಾನಹಕ್ಕುಗಳ ಮಂಡಳಿಯು ಮಂಗಳವಾರ ಶ್ರೀಲಂಕಾದ ಮಾನವಹಕ್ಕುಗಳ ದಾಖಲೆಯನ್ನು ಖಂಡಿಸಿ ನಿರ್ಣಯವೊಂದನ್ನು ಅಂಗೀಕರಿಸಿದೆ.
‘ಶ್ರೀಲಂಕಾದಲ್ಲಿ ಮಾನವಹಕ್ಕುಗಳಿಗೆ ಉತ್ತೇಜನ ನೀಡುವುದು ಮತ್ತು ಉತ್ತರದಾಯಿತ್ವವನ್ನು ನಿಗದಿಪಡಿಸುವುದು’ ಎಂಬ ಹೆಸರಿನ ನಿರ್ಣಯದ ಪರವಾಗಿ 47 ದೇಶಗಳ ಪೈಕಿ 22 ದೇಶಗಳು ಮತ ಹಾಕಿದವು. 11 ಸದಸ್ಯ ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದವು.
ಭಾರತ ಸೇರಿದಂತೆ 14 ದೇಶಗಳು ಮತದಾನದಿಂದ ದೂರವುಳಿದವು.
ಮತದಾನಕ್ಕೆ ಮುಂಚಿತವಾಗಿ ತನ್ನ ಪರವಾಗಿ ಅಂತರ್‌ರಾಷ್ಟ್ರೀಯ ಬೆಂಬಲವನ್ನು ಪಡೆಯಲು ಶ್ರೀಲಂಕಾ ತೀವ್ರ ಪ್ರಯತ್ನಗಳನ್ನು ನಡೆಸಿತಾದರೂ ಅದು ಯಶಸ್ವಿಯಾಗಲಿಲ್ಲ.
ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್‌ಟಿಟಿಇ)ನ ಬಂಡಾಯವನ್ನು ಮಟ್ಟಹಾಕುವ ಕೊನೆಯ ದಿನಗಳಲ್ಲಿ ಶ್ರೀಲಂಕಾ ಸೇನೆಯು ತಮಿಳರ ವಿರುದ್ಧ ಯುದ್ಧಾಪರಾಧ ನಡೆಸಿದ್ದು, ಅವರ ಮಾನವಹಕ್ಕುಗಳನ್ನು ಉಲ್ಲಂಘಿಸಿದೆ ಎಂಬುದಾಗಿ ನಿರ್ಣಯವು ಆರೋಪಿಸಿದೆ.
Next Story





