ಮಾಸ್ಕ್ ಉಲ್ಲಂಘನೆ: ಒಂದೇ ದಿನ 46,600 ರೂ. ದಂಡ ವಸೂಲಿ
ದ.ಕ. ಜಿಲ್ಲಾಧಿಕಾರಿ ನೇತೃತ್ವದಲ್ಲೇ ಸಮರೋಪಾದಿ ಕಾರ್ಯಾಚರಣೆ

ಫೈಲ್ ಫೋಟೊ
ಮಂಗಳೂರು, ಮಾ.23: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯ ಹಾದಿಯಲ್ಲಿದೆ. ಈ ನಡುವೆ ಸ್ವತಃ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರೇ ನಗರದ ಮಳಿಗೆಗಳಿಗೆ ಭೇಟಿ ನೀಡಿ, ಮಾಸ್ಕ್ ಉಲ್ಲಂಘನೆಯ ಪ್ರಕರಣ ಪತ್ತೆ ಹಚ್ಚಿದ್ದಾರೆ. ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿ ಜಿಲ್ಲೆಯಾದ್ಯಂತ ಒಂದೇದಿನ ದಾಖಲೆಯ ಪ್ರಕರಣ ಪತ್ತೆ ಹಚ್ಚಿ, 46,600 ರೂ. ದಂಡ ವಸೂಲಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಾಸ್ಕ್ ಉಲ್ಲಂಘನೆಗೆ ಸಂಬಂಧಪಟ್ಟಂತೆ ಮಂಗಳವಾರ 445 ಪ್ರಕರಣಗಳು ಪತ್ತೆಯಾಗಿವೆ. ಇದು ಇಡೀ ಕೋವಿಡ್ ಅವಧಿಯಲ್ಲಿ ಮಾಸ್ಕ್ ಉಲ್ಲಂಘನೆ ಪ್ರಕರಣದಲ್ಲಿ ದಂಡ ವಸೂಲಿ ಸಂಗ್ರಹಿಸಿರುವುದರಲ್ಲಿ ಜಿಲ್ಲೆ ಅತಿಹೆಚ್ಚು ಪ್ರಕರಣ ಪತ್ತೆ ಹಚ್ಚಿ ದಾಖಲೆ ಬರೆದಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 37,532 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 8,69,210 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಅಂಕಿ-ಅಂಶಗಳು ತಿಳಿಸಿವೆ.
ಮಾಸ್ಕ್ ಧರಿಸಿ; ಇಲ್ಲವೇ ದಂಡ ಪಾವತಿಸಿ: ಮಂಗಳೂರು ನಗರ ವ್ಯಾಪ್ತಿಯ ಬಂದರು ಪ್ರದೇಶ, ಸ್ಟೇಟ್ ಬ್ಯಾಂಕ್ ರಸ್ತೆ, ನೆಲ್ಲಿಕಾಯಿ ರಸ್ತೆ, ಅಝೀಝುದ್ದೀನ್ ರಸ್ತೆ ಸೇರಿದಂತೆ ವಿವಿಧೆಡೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ.ವಿ. ಭೇಟಿ ನೀಡಿ, ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆ ತಿಳಿಸುವುದರ ಜೊತೆಗೆ ಉಲ್ಲಂಘಿಸಿದ ಕೆಲವು ಟ್ರೇಡರ್ಸ್ಗಳಿಗೆ ದಂಡ ವಿಧಿಸಲು ಸೂಚನೆ ನೀಡಿದರು.
ತಮ್ಮ ಕಚೇರಿ ಆವರಣದಲ್ಲಿ ಮಾಸ್ಕ್ ಧರಿಸದ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಸರಕಾರಿ ಸೇರಿದಂತೆ ಖಾಸಗಿ ಕಚೇರಿಗಳಿಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರದ ಸ್ಟೇಟ್ ಬ್ಯಾಂಕ್ ವೃತ್ತದ ಸಮೀಪ ಕೆಲವು ಖಾಸಗಿ ಬಸ್ಗಳು ಹಾಗೂ ಬೈಕ್ ಸವಾರರನ್ನು ತಡೆದು ಮಾಸ್ಕ್ ಧರಿಸುವಂತೆ ಜಿಲ್ಲಾಧಿಕಾರಿ ಹೇಳಿದರು. ಮಾಸ್ಕ್ ಇಲ್ಲದೇ ಬಸ್ನಲ್ಲಿ ಪ್ರಯಾಣಿಸುವ ಜನರಿಗೆ ಬಸ್ ಒಳಗಡೆ ಪ್ರವೇಶಿಸಲು ಬಿಡಬೇಡಿ ಎಂದು ಚಾಲಕ ಹಾಗೂ ನಿರ್ವಾಹಕರಿಗೆ ಸೂಚನೆ ನೀಡಿದರು.
ನಗರದ ಬಂದರ್ನ ಅಝೀಝುದ್ದೀನ್ ರಸ್ತೆಯ ಕೆಲವು ವಾಣಿಜ್ಯ ಮಳಿಗೆಗೆ ಭೇಟಿ ನೀಡಿ ಮಾಸ್ಕ್ ಧರಿಸದೇ ಇದ್ದವರಿಗೆ ತರಾಟೆಗೆ ತೆಗೆದು ಕೊಂಡರು. ಮಳಿಗೆಯ ಮಾಲಕರಿಗೆ 5,000 ರೂ. ದಂಡ ವಿಧಿಸಲು ಸೂಚನೆ ನೀಡಿದರು. ಜೊತೆಗೆ ಮಹಿಗೆಯ ಒಳಗೆ ಮಾಸ್ಕ್ ಧರಿಸದೇ ಕೆಲಸ ಮಾಡುವುದು ಕಂಡು ಬಂದರೆ ಕಂಪೆನಿಯನ್ನು ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ಅದೇ ರಸ್ತೆಯ ಮತ್ತೊಂದು ವಾಣಿಜ್ಯ ಮಳಿಗೆಗೆ ಭೇಟಿ ನೀಡಿ, ಅಲ್ಲಿನ ಮಾಲಕ ಹಾಗೂ ಸಿಬ್ಬಂದಿ ಮಾಸ್ಕ್ ಧರಿಸದೇ ಬೇಜವಾಬ್ದಾರಿಯಿಂದ ಕುಳಿತಿರುವುದನ್ನು ಕಂಡು ಅಂಗಡಿ ಮಾಲಕರಿಗೆ 5,000 ರೂ. ದಂಡ ವಿಧಿಸಲು ಸೂಚಿಸಿದರು. ಗ್ರಾಹಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಆಯಾ ಅಂಗಡಿ ಮಾಲಕರು ನಿಗಾ ವಹಿಸಬೇಕು. ಇಲ್ಲದಿದ್ದರೆ ಮಾಲಕರಿಗೆ ದಂಡ ವಿಧಿಸಿ ಎಂದು ಎಚ್ಚರಿಸಿದರು.
ಬಂದರಿನ ಮುಹಮ್ಮದ್ ರಸ್ತೆಯ ಮತ್ತೊಂದು ವಾಣಿಜ್ಯ ಮಳಿಗೆಗೆ ಏಕಾಏಕಿ ದಾಳಿ ನಡೆಸಿ ಮಾಸ್ಕ್ ಧರಿಸದೇ ಕೆಲಸ ಮಾಡುತ್ತಿದ್ದ ಮಾಲಕನಿಗೆ ಕೂಡ ದಂಡ ವಿಧಿಸಲು ತಿಳಿಸಿದ ಅವರು, ಮತ್ತೊಮ್ಮೆ ನಿಯಮ ಉಲ್ಲಂಘನೆ ಮಾಡಿದ ಪ್ರಕರಣಗಳು ಕಂಡುಬಂದರೆ ಹೆಚ್ಚಿನ ದಂಡ ವಿಧಿಸಲಾಗು ವುದು ಹಾಗೂ ಅಂಗಡಿಯನ್ನು ಮುಲಾಜಿಲ್ಲದೇ ಮುಚ್ಚಿಸಲಾಗುವುದು ಎಂದರು.
ಬಂದರು ಪ್ರದೇಶದ ಜೆ.ಎಂ ರಸ್ತೆಯ ಸಮೀಪ ಮಾಸ್ಕ್ ಧರಿಸದೇ ಆಟೊ ರಿಕ್ಷಾ ಚಾಲನೆ ಮಾಡುತ್ತಿದ್ದ ಚಾಲಕನ ವಾಹನ ಸಂಖ್ಯೆಯನ್ನು ನಮೂದಿಸಿ ದಂಡ ವಿಧಿಸಲು ತಿಳಿಸಿದರು. ಕೋವಿಡ್ ನಿಯಮ ಉಲ್ಲಂಘನೆ ಮಾಡುವ ಪ್ರಯಾಣಿಕರನ್ನು ಆಟೋದಲ್ಲಿ ಹತ್ತಿಸಬಾರದು ಎಂದು ಸೂಚನೆ ನೀಡಿದರು.
ಲಾಕ್ಡೌನ್ನಿಂದಾಗಿ ಅನೇಕ ತೊಂದರೆಗಳು ಎದುರಾಗುತ್ತದೆ ಹಾಗೂ ಜನರ ಜೀವನವೇ ಕಷ್ಟಕರವಾಗುತ್ತದೆ. ಕಳೆದ ಬಾರಿಯ ಲಾಕ್ಡೌನ್ ನಿಂದಾದ ಪರಿಣಾಮಗಳನ್ನು ಪ್ರತಿಯೊಬ್ಬರು ಅನುಭವಿಸಿದ್ದಾರೆ. ಲಾಕ್ಡೌನ್ಗೆ ದಾರಿ ಮಾಡಿಕೊಡದೆ ಜನರಿಗೆ ಜಾಗೃತಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ, ಉಪ ವಿಭಾಗ ಅಧಿಕಾರಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯಾರಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಪಾಲಿಕೆ ಆರೋಗ್ಯಾಧಿಕಾರಿ ಮಂಜೇಶ್ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶಿಕ್ಷಣಾಧಿಕಾರಿ ಜ್ಯೋತಿ, ಪಾಲಿಕೆ, ಪೊಲೀಸ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ಕುಟುಂಬದ ರಕ್ಷಣೆಯನ್ನು ಮಾಡುವ ಜವಾಬ್ದಾರಿ ಹೊಂದಿರಬೇಕು. ಹೆಚ್ಚಿನ ಪ್ರಮಾಣದಲ್ಲಿ ಜನರು ಕೋವಿಡ್ ನಿಯಮಗಳ ಉಲಂಘನೆ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ ದಿಢೀರ್ ದಾಳಿ ನಡೆಸಿ ದಂಡ ವಿಧಿಸಲಾಗುವುದು. ಆಯಾ ಅಂಗಡಿ, ವಾಹನಗಳ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುವುದು.
-ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ







