ಬಿಲ್ ಕೇಳಿದ್ದಕ್ಕೆ ಡಾಬಾ ಮಾಲಕ ಸಹಿತ 10 ಮಂದಿಯ ಬಂಧನ
ಪೊಲೀಸ್ ಇನ್ಸ್‌ಪೆಕ್ಟರ್, ಇಬ್ಬರು ಕಾನ್ಸ್‌ಟೇಬಲ್‌ಗಳ ಅಮಾನತು

ಲಕ್ನೋ, ಮಾ. 23: ನಕಲಿ ಸಾರಾಯಿ ಹಾಗೂ ಗಾಂಜಾ ಪತ್ತೆಯಾಗಿದೆ ಎಂದು ಸುಳ್ಳು ಆರೋಪ ಹೊರಿಸಿ ಡಾಬಾದ ಮಾಲಕ ಹಾಗೂ ಇತರ 9 ಮಂದಿಯನ್ನು ಬಂಧಿಸಿ ಜೈಲಿಗಟ್ಟಿದ ಆರೋಪದಲ್ಲಿ ಉತ್ತರಪ್ರದೇಶದ ಇಟಾಹ್ ಜಿಲ್ಲೆಯ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಕನಿಷ್ಠ ಇಬ್ಬರು ಕಾನ್ಸ್‌ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ.
ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ತಿಳಿದು ತನಿಖೆಗೆ ಆದೇಶಿಸಿದರು ಹಾಗೂ 40 ದಿನಗಳ ಬಳಿಕ ಪೊಲೀಸರು ತಮ್ಮ ಸಹೋದ್ಯೋಗಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿದ್ದ ಈ ಪೊಲೀಸರು, ಡಾಬಾದ ಮಾಲಕ ಹಾಗೂ ಇತರರು ನಕಲಿ ಸಾರಾಯಿ ಹಾಗೂ ಮಾದಕ ದ್ರವ್ಯ ಕಳ್ಳ ಸಾಗಾಣಿಕೆ ಮಾಡಲು ಪ್ರಯತ್ನಿಸುತ್ತಿದ್ದರು. ಫೆಬ್ರವರಿ 4ರಂದು ಎನ್‌ಕೌಂಟರ್ ನಡೆಸಿ ಅವರನ್ನು ಬಂಧಿಸಲಾಯಿತು.
ಅವರಿಂದ ದೇಶೀ ನಿರ್ಮಿತ 6 ರಿವಾಲ್ವರ್, 12 ಸಜೀವ ಕಾಟ್ರಿಜ್, 2 ಕೆ.ಜಿ. ಗಾಂಜಾ, 80 ಲೀಟರ್ ನಕಲಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು. ಆದರೆ, ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಡಾಬಾದ ಮಾಲಕನ ಸಹೋದರ ಪ್ರವೀಣ ಕುಮಾರ್, ‘‘ಕೆಲವು ಪೊಲೀಸರು ನನ್ನ ಡಾಬಾದಲ್ಲಿ ಆಹಾರ ಸೇವಿಸಿದ್ದರು. ನನ್ನ ಸಹೋದರ ಅಲ್ಲಿದ್ದ. ನಾನು ಮನೆಯಲ್ಲಿದ್ದೆ. ಆಹಾರದ ಬಿಲ್ ಪಾವತಿಸುವ ಬಗ್ಗೆ ಪೊಲೀಸರು ನನ್ನ ಸಹೋದರನೊಂದಿಗೆ ವಾಗ್ವಾದ ನಡೆಸಿದ್ದರು. ಅವರು ಯಾವಾಗಲು ಇಲ್ಲಿಗೆ ಬಂದು ಆಹಾರ ಸೇವಿಸುತ್ತಿದ್ದರು. ಆದರೆ, ಬಿಲ್ ಪಾವತಿಸುತ್ತಿರಲಿಲ್ಲ’’ ಎಂದು ಆರೋಪಿಸಿದ್ದಾರೆ. ‘‘ಈ ಪೊಲೀಸರು ಮದ್ಯ ಕುಡಿದಿದ್ದರು.
ಅವರು ನನ್ನ ಸಹೋದರನಿಗೆ ಥಳಿಸಿದರು, ನಿಂದಿಸಿದರು. ಬೆದರಿಕೆ ಒಡ್ಡಿದ್ದರು. ಪ್ರತೀಕಾರ ತೀರಿಸುವುದಾಗಿ ತಿಳಿಸಿ ತೆರಳಿದ್ದರು. ಎರಡು ದಿನಗಳ ಬಳಿಕ ಎರಡು ಪೊಲೀಸ್ ಜೀಪ್ ನನ್ನ ಧಾಬಾಕ್ಕೆ ಆಗಮಿಸಿತು. ನನ್ನ ಸಹೋದರ ಹಾಗೂ ಗ್ರಾಹಕರು ಸೇರಿದಂತೆ ಪ್ರತಿಯೊಬ್ಬರನ್ನು ಜೀಪಿನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು. ನಮ್ಮ ವಿರುದ್ಧ ಪ್ರಕರಣ ದಾಖಲಿಸಿದರು. ನನ್ನ ಸಹೋದರನ ವಶದಲ್ಲಿ ನಕಲಿ ಸಾರಾಯಿ ಪತ್ತೆಯಾಗಿದೆ ಎಂದು ಆರೋಪಿಸಿದ್ದರು’’ ಎಂದು ಅವರು ಹೇಳಿದ್ದಾರೆ.
ನನ್ನ ಸಹೋದರ ದೇಶಿ ನಿರ್ಮಿತ ಪಿಸ್ತೂಲ್‌ನಿಂದ 6 ಸುತ್ತು ಗುಂಡು ಹಾರಿಸಿದ. ಆದುದರಿಂದ ನಾವು ಎನ್‌ಕೌಂಟರ್ ನಡೆಸಿ 11 ಮಂದಿಯನ್ನ ಬಂಧಿಸಿದೆವು. ಓರ್ವರನ್ನು ಬಿಡುಗಡೆ ಮಾಡಿದೆವು. ಉಳಿದವರನ್ನು ಜೈಲಿನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ. ಇಂದು ಟ್ವಿಟ್ಟರ್‌ನಲ್ಲಿ ಹೇಳಿಕೆ ಪೋಸ್ಟ್ ಮಾಡಿರುವ ಇಟಾಹ್ ಪೊಲೀಸರು, ಅಮಾನತುಗೊಳಿಸಲಾದ ಪೊಲೀಸರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸತ್ಯವೆಂದು ಕಂಡು ಬಂದಿದೆ ಎಂದಿದ್ದಾರೆ.







