ಕರ್ನಾಟಕ ಸೊಸೈಟಿಗಳ ನೋಂದಣಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಸ್ತು
ಸಾಮಾನ್ಯ-ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯ ನಿವಾರಣೆಗೆ ಕ್ರಮ

ಬೆಂಗಳೂರು, ಮಾ.23: ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯ ತೊಡೆದು ಹಾಕಲು ರಾಜ್ಯ ಸರಕಾರವು ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮ 1960ಕ್ಕೆ ಮತ್ತಷ್ಟು ತಿದ್ದುಪಡಿ ತರಲು 2021ನೇ ಸಾಲಿನ ಕರ್ನಾಟಕ ಸೊಸೈಟಿಗಳ ನೋಂದಣಿ(ತಿದ್ದುಪಡಿ)ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿದೆ.
ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಧರಣಿ ನಡುವೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಂಡಿಸಿದ ವಿಧೇಯಕಕ್ಕೆ ಯಾವುದೇ ಚರ್ಚೆಯಿಲ್ಲದೆ ವಿಧಾನಸಭೆಯಲ್ಲಿ ಅನುಮೋದನೆ ಲಭಿಸಿತು.
ಈ ವಿಧೇಯಕದ ಬಗ್ಗೆ ವಿವರಣೆ ನೀಡಿದ ಎಸ್.ಟಿ.ಸೋಮಶೇಖರ್, ರಾಜ್ಯದಲ್ಲಿ 3,71,397 ಸೊಸೈಟಿಗಳಿವೆ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯದ 6,807 ಸೊಸೈಟಿಗಳಿವೆ. ಇವುಗಳಲ್ಲಿ 48 ಸಂಘಗಳಿಗೆ ಮಾತ್ರ ಸರಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ ಎಂದರು.
ಈ ಕಾಯ್ದೆಯ ‘27 ಎ’ಗೆ ತಿದ್ದುಪಡಿ ತರಲಾಗಿದ್ದು, ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಬೇರೆ ಯಾವುದೆ ಕಾಯ್ದೆಯಡಿ ನೋಂದಣಿಯಾಗಿರುವಂತಹ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಬದಲಾಗಿ ಬೇರೆ ಯಾವುದೇ ಕಾಯ್ದೆಯಡಿ ನೋಂದಣಿಯಾಗಿದ್ದರೂ ಈ ಕಾಯ್ದೆ ಅನ್ವಯಿಸುತ್ತದೆ ಎಂದು ಸೋಮಶೇಖರ್ ಹೇಳಿದರು.
ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸಂಘ ಸಂಸ್ಥೆಗಳು ವಾರ್ಷಿಕ ಸಭೆ ನಡೆಸದಿದ್ದರೆ, ಆಡಳಿತ ಸಮಿತಿ ಅವಧಿ ಮುಗಿದಿದ್ದರೂ ಚುನಾವಣೆ ನಡೆಸದಿದ್ದರೆ, ವಿಚಾರಣೆ ವೇಳೆ ಲೋಪದೋಷಗಳು ಕಂಡು ಬಂದಲ್ಲಿ ಸರಕಾರ ಎಚ್ಚೆತ್ತುಕೊಳ್ಳುತ್ತದೆ. ಈ ಶಾಸನ ಸಭೆ ಅನುಮೋದನೆ ನೀಡಿದ ನಂತರ ಸಂವಿಧಾನದ ಅನುಚ್ಛೇದ 30ಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸುತ್ತೇವೆ ಎಂದು ಸೋಮಶೇಖರ್ ತಿಳಿಸಿದರು.
ಅಲ್ಪಸಂಖ್ಯಾತರಿಗೆ ಸೇರಿದ ಅಥವಾ ಇತರ ಯಾವುದೇ ಸೊಸೈಟಿಯು, ವ್ಯಾಜ್ಯವು ಬಾಕಿಯಿರುವ ಕಾರಣದಿಂದಾಗಿ ವಾರ್ಷಿಕ ಮಹಾಸಭೆಯನ್ನು ನಡೆಸಿಲ್ಲದಿದ್ದರೆ ಅಥವಾ ನಡೆಸಲು ಅಸಮರ್ಥವಾದರೆ, ಅಲ್ಪಸಂಖ್ಯಾತರಿಗೆ ಸೇರಿದ ಅಥವಾ ಇತರ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರ ಪದಾವಧಿಯು ಮುಕ್ತಾಯಗೊಂಡಿದ್ದರೆ ಮತ್ತು ಹೊಸ ಆಡಳಿತ ಮಂಡಳಿಯನ್ನು ಯಾವುದೇ ಕಾರಣಕ್ಕಾಗಿ ರಚಿಸಿಲ್ಲದಿದ್ದರೆ, ರಿಜಿಸ್ಟ್ರಾರ್ ಅಥವಾ ಇತರರು ಮಾಡಿದ ವರದಿಯ ಮೇರೆಗೆ, ರಾಜ್ಯ ಸರಕಾರವು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅಗತ್ಯವೆಂದು ಪರಿಗಣಿಸಿದರೆ ಆಡಳಿತಾಧಿಕಾರಿಯನ್ನು ನೇಮಿಸಬಹುದು.







