ನಿವೃತ್ತ ಸೈನಿಕರಿಗೆ ಸರಕಾರಿ ಜಮೀನು ಮಂಜೂರಿಗೆ ಕ್ರಮ: ಶ್ರೀನಿವಾಸ ಪೂಜಾರಿ

ಬೆಂಗಳೂರು, ಮಾ.23: ಕೊಡಗು ಜಿಲ್ಲೆಯಲ್ಲಿ ನಿವೃತ್ತ ಸೈನಿಕರು ಹಾಗೂ ಅವಲಂಬಿತರಿಗೆ ಸರಕಾರದಿಂದ ನಿವೇಶನ ಮಂಜೂರಾತಿ ಮಾಡುವಲ್ಲಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪರಿಷತ್ ಸಭಾನಾಯಕ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಮಂಗಳಾರ ವಿಧಾನಪರಿಷತ್‍ನ ಮಧ್ಯಾಹ್ನದ ಕಲಾಪದಲ್ಲಿ ನಿಯಮ 330ರಡಿಯಲ್ಲಿ ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಿವೃತ್ತ ಸೈನಿಕರು ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ಸರಕಾರಿ ಜಮೀನಿನ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು 10ರಿಂದ 15ಸಾವಿರ ನಿವೃತ್ತ ಸೈನಿಕರು ಹಾಗೂ ಅವಲಂಬಿತರು ಹತ್ತಾರು ವರ್ಷದಿಂದ ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಆದರೆ, ಜಿಲ್ಲಾಧಿಕಾರಿಗಳು ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಸೂಚಿಸಿದ್ದಾರೆ. ಹೀಗಾಗಿ ಒತ್ತುವರಿಯನ್ನು ತೆರವುಗೊಳಿಸದಂತೆ ರಾಜ್ಯ ಸರಕಾರ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.





