ಸಿಎಎ ಕಾನೂನು ರೂಪಿಸಲು ಸಂಸತ್‌ನಿಂದ ಕೇಂದ್ರಕ್ಕೆ ಕಾಲಾವಕಾಶ ವಿಸ್ತರಣೆ

ಹೊಸದಿಲ್ಲಿ,ಮಾ.23: ನೂತನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ಸಂಬಂಧಿಸಿದ ಕಾನೂನುಗಳನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ಲೋಕಸಭೆ ಎಪ್ರಿಲ್ 9ರವರೆಗೆ ಹಾಗೂ ರಾಜ್ಯಸಭೆ ಜುಲೈ 9ರವರೆಗೆ ಕೇಂದ್ರ ಸರಕಾರವು ಕಾಲಾವಕಾಶ ನೀಡಿದೆ.
ಪೌರತ್ವ ತಿದ್ದುಪಡಿ ಕಾಯ್ದೆ-2019ಕ್ಕೆ ಸಂಬಂಧಿಸಿ 2019ರ ಡಿಸೆಂಬರ್ 12ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅದು 2020ರ ಜನವರಿ 10ರಂದು ಜಾರಿಗೆ ಬಂದಿದೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ನಿತ್ಯಾನಂದ ರಾಯ್ ಮಂಗಳವಾರ ಲೋಕಸಭೆಗೆ ತಿಳಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯ ಕಾನೂನುಗಳನ್ನು ರೂಪಿಸಲು ಲೋಕಸಭೆ ಹಾಗೂ ರಾಜ್ಯಸಭೆಯ ಅಧೀನ ಶಾಸನಗಳ ಸಮಿತಿ ಗಳು ಕ್ರಮವಾಗಿ ಎಪ್ರಿಲ್ 9 ಹಾಗೂ ಜುಲೈ 9ರವರೆಗೆ ಕಾಲಾವಕಾಶ ನೀಡಿದೆಯೆಂದು ಅವರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಎಎ ಕಾನೂನುಗಳ ಬಗ್ಗೆ ಕೇಂದ್ರ ಸರಕಾರವು ಅಧಿಸೂಚನೆಯನ್ನು ಹೊರ ಡಿಸಿದ ಬಳಿಕ ಕಾಯ್ದೆಯ ವ್ಯಾಪ್ತಿಗೆ ಬರುವ ವಿದೇಶಿಯರು ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ರಾಯ್ ತಿಳಿಸಿದರು.
ವಿವಾದಾತ್ಮಕ ಸಿಎಎ ಕಾಯ್ದೆಯ ಜಾರಿಗೆ ಸಂಬಂಧಿಸಿದ ಕಾನೂನುಗಳನ್ನು ಕೇಂದ್ರ ಗೃಹ ಸಚಿವಾಲಯವು 2020ರ ಜೂನ್ 18ರೊಳಗೆ ರೂಪು ಗೊಳಿಸಲು ಉದ್ದೇಶಿಸಿತ್ತಾದರೂ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಕಾಯ್ದೆಯು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ವಿಶ್ವಸಂಸ್ಥೆ ಹಾಗೂ ಹಲವಾರು ಪಾಶ್ಚಾತ್ಯ ದೇಶಗಳ ಪ್ರಜೆಗಳು ಕೂಡಾ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಖಂಡಿಸಿದ್ದರು.







