224 ಶಾಸಕರ ಬಗ್ಗೆಯೂ ತನಿಖೆಯಾಗಲಿ. ಯಾರೆಲ್ಲ ಶ್ರೀರಾಮಚಂದ್ರರು, ಮರ್ಯಾದ ಪುರುಷರೆಂದು ಗೊತ್ತಾಗಲಿ: ಡಾ.ಸುಧಾಕರ್

ಬೆಂಗಳೂರು, ಮಾ.24: ತಾವು ಮಾರ್ಯಾದ ಪುರುಷರು, ಶ್ರೀರಾಮನಂಥವರು ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸವಾಲು ಹಾಕುತ್ತೇನೆ. 224 ಶಾಸಕರು ತನಿಖೆ ಎದುರಿಸಲಿ, ಯಾರ್ಯಾರು ವಿವಾಹೇತರ ಮತ್ತು ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಾಗಲಿ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶ್ಲೀಲ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್, ಬಿ.ಮುನಿಯಪ್ಪ, ಸಿದ್ದರಾಮಯ್ಯನವರು ಮತ್ತು ನಮ್ಮ ಕುಮಾರಣ್ಣನವರು ಎಲ್ಲರೂ ಸತ್ಯ ಹರಿಶ್ಚಂದ್ರರಲ್ಲವೇ? ಏಕಪತ್ನಿವ್ರತಸ್ಥರಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಇವರೆಲ್ಲರೂ ಒಪ್ಪಿಕೊಳ್ಳಲಿ. ತಾನು ಸೇರಿದಂತೆ 224 ಶಾಸಕರ ಮೇಲೆ ತನಿಖೆ ನಡೆಯಲಿ. ಯಾರ್‍ಯಾರು ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ದಾರೆ ಎಂಬುದು ಹೊರಬರಲಿ ಎಂದು ಡಾ.ಸುಧಾಕರ್ ಒತ್ತಾಯಿಸಿದ್ದಾರೆ.





