ಅಸ್ಸಾಂ ರಾಜ್ಯವನ್ನು ಇನ್ನೊಂದು ಗುಜರಾತ್ ಆಗಿ ಪರಿವರ್ತಿಸಲು ಬಿಜೆಪಿ ಯತ್ನಿಸುತ್ತಿದೆ: ಗೌರವ್ ಗೊಗೊಯಿ

ಗುವಾಹಟಿ: "ಅಸ್ಸಾಮಿನ ಐವರು ಮಣ್ಣಿನ ಮಕ್ಕಳು ಸಿಎಎ ವಿರೋಧಿ ಹೋರಾಟದಲ್ಲಿ ಪ್ರಾಣ ತೆತ್ತಿದ್ದರೂ ಬಿಜೆಪಿಗೆ ಅದೊಂದು ವಿಚಾರವೇ ಅಲ್ಲ. ಅದು ಬಲವಂತವಾಗಿ ಸಿಎಎ ಜಾರಿಗೊಳಿಸಲು ಮನಸ್ಸು ಮಾಡಿದೆ ಹಾಗೂ ಅಸ್ಸಾಂ ರಾಜ್ಯವನ್ನು ಇನ್ನೊಂದು ಗುಜರಾತ್ ಆಗಿ ಪರಿವರ್ತಿಸಲು ಬಿಜೆಪಿ ಯತ್ನಿಸುತ್ತಿದೆ" ಎಂದು ಅಸ್ಸಾಂನ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ ಅವರ ಪುತ್ರ ಗೌರವ್ ಗೊಗೊಯಿ ಹೇಳಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು "ಬಿಜೆಪಿಯ ತೀವ್ರಗಾಮಿ ರಾಜಕೀಯ ಹಿಂಸೆಯನ್ನು ಉತ್ತೇಜಿಸುತ್ತಿದೆ" ಎಂದು ಹೇಳಿದರು. ಇದೇ ಕಾರಣಕ್ಕೆ ಅಸ್ಸಾಂನಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಮಹತ್ವ ಪಡೆದಿದೆ ಹಾಗೂ ಕಾಂಗ್ರೆಸ್ ಸರಕಾರ ಮಾತ್ರ ಇಲ್ಲಿ ಶಾಂತಿ ಸೌಹಾರ್ದತೆಯನ್ನು ಉಳಿಸಬಹುದು" ಎಂದು ಅವರು ಹೇಳಿದರು.
"ಬಿಜೆಪಿ ಕೆಲವೊಂದು ಕಾನೂನುಗಳನ್ನು ತನ್ನ ಲಾಭಕ್ಕಾಗಿ ಹಾಗೂ ಜನರ ನಡುವೆ ದ್ವೇಷ ಬೆಳೆಸಲು ಜಾರಿಗೊಳಿಸುತ್ತಿದೆ" ಎಂದು ಗೌರವ್ ಗೊಗೊಯಿ ಆರೋಪಿಸಿದರು. "ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಸ್ಸಾಂ ಒಪ್ಪಂದದಂತೆ ಜಾತಿ, ಧರ್ಮವನ್ನು ಲೆಕ್ಕಿಸದೆ ವಲಸಿಗರನ್ನು ಸ್ವೀಕರಿಸುತ್ತೇವೆ, ಅಸಂವಿಧಾನಾತ್ಮಕ ಸಿಎಎ ನಿಬಂಧನೆಗಳನ್ನು ಒಪ್ಪುವುದಿಲ್ಲ" ಎಂದು ಅವರು ಹೇಳಿದರು.
ತನ್ನ ರಾಜಕೀಯ ಅಜೆಂಡಾ ಈಡೇರಿಸಲು ಬಿಜೆಪಿ ಯಾವತ್ತೂ ಧ್ರುವೀಕರಣಕ್ಕೆ ಆದ್ಯತೆ ನೀಡಿದೆ. ಧರ್ಮದ ಆಧಾರದಲ್ಲಿ ಒಂದು ಸಮುದಾಯವನ್ನು ಅದು ಟಾರ್ಗೆಟ್ ಮಾಡುತ್ತಿದೆ. ಇದು ಭಾರತದ ಪರಿಕಲ್ಪನೆಯಲ್ಲ ಇದು ಅಸ್ಸಾಂನ ಪರಿಕಲ್ಪನೆಯಲ್ಲ, ಹಿಂದುಗಳು ಹಾಗೂ ಮುಸ್ಲಿಮರ ಬಗ್ಗೆ ಅಸ್ಸಾಂ ಯಾವತ್ತೂ ಬೇಧಭಾವ ಮಾಡಿಲ್ಲ" ಎಂದು ಅವರು ಹೇಳಿದರು.







