ನಿರಂತರ ಆದಾಯಕ್ಕೆ ಮಲ್ಲಿಗೆ ಕೃಷಿ: ರಾಮಕೃಷ್ಣ ಶರ್ಮ ಬಂಟಕಲ್ಲು

ಕುಂದಾಪುರ, ಮಾ.24: ಮಲ್ಲಿಗೆ ಅಧಿಕ ಲಾಭ ನೀಡುವ ಬೆಳೆ. ಕೃಷಿಕರು ತಮ್ಮಲ್ಲೇ ಇರುವ ಗೊಬ್ಬರ, ನೀರು ಇತ್ಯಾದಿ ಸಂಪನ್ಮೂಲಗಳನ್ನು ಮಿತವಾಗಿ ಬಳಸಿ, ಗಿಡಗಳ ಸಾವಯವ ಪೋಷಣೆ ಕ್ರಮಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡು ಮಲ್ಲಿಗೆ ಕೃಷಿ ಮಾಡಬೇಕು. ಇದರಿಂದ ಕೀಟನಾಶಕಗಳಿಗೆ, ರೋಗ ನಿರ್ವಹಣೆಗೆ ಅನಗತ್ಯ ವಾಗಿ ಖರ್ಚು ಮಾಡುವ ಪ್ರಮೇಯ ಇರುವುದಿಲ್ಲ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದ್ದಾರೆ.
ಜಿಲ್ಲಾ ಕೃಷಿಕ ಸಂಘದ ಕುಂದಾಪುರ ವಲಯ ಸಮಿತಿ ಮತ್ತು ಮಲ್ಲಿಗೆ ಬೆಳೆಗಾರರ ಒಕ್ಕೂಟದ ಆಯೋಜನೆಯಲ್ಲಿ ಹುಣ್ಸೆಮಕ್ಕಿ ಆರ್.ಕೆ. ಪೌಲ್ಟ್ರಿ ಪಾರ್ಮ್ ವಠಾರದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯ ಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತಿದ್ದರು.
ಹಿರಿಯ ಕೃಷಿಕ ಸಿದ್ಧಯ್ಯ ಶೆಟ್ಟಿ ಕಟ್ಕೆರೆ ಉದ್ಘಾಟಿಸಿದ ಈ ಕಾರ್ಯಕ್ರಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಸುಬ್ಬಣ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಲಲಿತಾ ಶೆಟ್ಟಿ ಕಟ್ಕೆರೆ ಭಾಗವಹಿಸಿದ್ದರು. ಕೃಷಿಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಾಧನಶೀಲ ರಾಷ್ಟ್ರೀಯ ಕೃಷಿಕ ಪ್ರಶಸ್ತಿ ವಿಜೇತ ಕುದಿ ಶ್ರೀನಿವಾಸ ಟ್ ಮಲ್ಲಿಗೆ ಕೃಷಿ ನಾಟಿ, ಕೀಟ-ರೋಗ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಸಂಘಟನೆ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿಕ ಸಂಘ ಕುಂದಾಪುರ ವಲಯ ಸಮಿತಿ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಆನಗಳ್ಳಿ, ಉಪಾಧ್ಯಕ್ಷ ಚಂದ್ರ ಪೂಜಾರಿ ಬಾಳೇಬೈಲು, ಕಾರ್ಯಕ್ರಮ ಸಂಯೋಜಕ ರಮೇಶ್ ಪೂಜಾರಿ ಕ್ಯಾಸನಮಕ್ಕಿ, ಇಂದಿರಾ ಶೆಟ್ಟಿ, ಶಶಿಕಲಾ, ರಮ್ಯ ಪೂಜಾರಿ, ಸುರೇಖಾ, ಶಿವಾನಂದ, ಗಣೇಶ್ ಪೂಜಾರಿ, ಅಣ್ಣಪ್ಪಯ್ಯ ಕುಂದಾಪುರ. ಸುಜಾತ ಶೆಟ್ಟಿ ಹಳ್ಳಾಡಿ ಮೊದಲಾದವರು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾ. ಯೋ. ಸದಸ್ಯೆ ಕಲಾವತಿ ಗಾಣಿಗ ವಂದಿಸಿದರೆ, ಶಿಕ್ಷಕ ಚಂದ್ರ ಜಪ್ತಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.







