ಸಚಿವ ಸುಧಾಕರ್ ಹೇಳಿಕೆಗೆ ವಿರೋಧ ಪಕ್ಷಗಳು ಆಕ್ರೋಶ ವಿಧಾನಸಭೆಯಲ್ಲಿ ಧರಣಿ; ರಾಜೀನಾಮೆಗೆ ಆಗ್ರಹ

ಬೆಂಗಳೂರು, ಮಾ.24: ‘ರಮೇಶ್ ಕುಮಾರ್, ವಿ.ಮುನಿಯಪ್ಪ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಇದರಲ್ಲಿ ಸತ್ಯಹರಿಶ್ಚಂದ್ರರಿದ್ದಾರೆ. ಎಲ್ಲರೂ ಏಕಪತ್ನಿವ್ರತಸ್ಥರು. ಇವರು ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ ಅಲ್ಲವೇ? ಇವರು ಎಲ್ಲರೂ ಕೂಡ ಒಪ್ಪಿಕೊಳ್ಳಲಿ, 225 ಜನರ ಮೇಲೂ ತನಿಖೆಯಾಗಲಿ. ಯಾರ್ಯಾರ ಬಂಡವಾಳ ಏನು ಅನ್ನೋದು ರಾಜ್ಯದ ಜನತೆಗೆ ಗೊತ್ತಾಗಲಿ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಗೆ ವಿರೋಧ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಧರಣಿ ನಡೆಸಿದರು. ಅಲ್ಲದೆ, ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗೆ ಆಗ್ರಹಿಸಿದರು.
ಬುಧವಾರ ಭೋಜನ ವಿರಾಮದ ಬಳಿಕ ಸದನ ಸೇರುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಆರ್.ವಿ.ದೇಶಪಾಂಡೆ, ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಎಲ್ಲ ಶಾಸಕರ ಮನಸ್ಸಿಗೂ ನೋವಾಗಿದೆ ಎಂದು ನಾನು ಭಾವಿಸುತ್ತೇನೆ. ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವರು ಈ ಸದನದಲ್ಲಿರುವ 225 ಶಾಸಕರು ಯಾರು ಹರಿಶ್ಚಂದ್ರರಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ, ರಮೇಶ್ ಕುಮಾರ್, ಶಿವಕುಮಾರ್ ಹಾಗೂ ಕುಮಾರಸ್ವಾಮಿಯ ಹೆಸರುಗಳನ್ನು ಉಲ್ಲೇಖಿಸಿದ್ದಾರೆ ಎಂದರು.
ಈ ಸದನದ ಸದಸ್ಯರಾಗಿ ನಮಗೂ ಮರ್ಯಾದೆ ಪ್ರಶ್ನೆ. 35-36 ವರ್ಷದಿಂದ ಈ ಸದನದಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಹೇಳಿಕೆ ಯಾರೂ ನೀಡಿರಲಿಲ್ಲ. ಇಲ್ಲಿ ಮಹಿಳಾ ಶಾಸಕರು ಇದ್ದಾರೆ. ಅವರ ಮರ್ಯಾದೆ ಏನು? ಜನ ಅವರ ಬಗ್ಗೆ ಏನು ತಿಳಿದುಕೊಳ್ಳಬೇಕು. ಆದುದರಿಂದ, ನಾನು ಮುಖ್ಯಮಂತ್ರಿಯನ್ನು ಆಗ್ರಹಿಸುತ್ತೇನೆ ನೀವು ಆ ಸಚಿವರಿಂದ ಕ್ಷಮೆ ಕೇಳಿಸಿ. ಇಲ್ಲ, ಈಗ ಸಿಡಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್‍ಐಟಿಗೆ ನಮ್ಮನ್ನೆಲ್ಲ ಸೇರಿಸಿ ತನಿಖೆ ಮಾಡಿಸಿ. ಸಚಿವರ ಹೇಳಿಕೆಯಿಂದ ಬಹಳ ನೋವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸಚಿವ ಸುಧಾಕರ್ ಹತಾಶೆಯೋ, ದುರುದ್ದೇಶದಿಂದ ಹೇಳಿದ್ದಾರೊ ಗೊತ್ತಿಲ್ಲ. ನಿಮ್ಮನ್ನು(ಸ್ಪೀಕರ್) ಸೇರಿಸಿ 225 ಸದಸ್ಯರನ್ನು ಯಾರು ಹರಿಶ್ಚಂದ್ರರಲ್ಲ ಎಂದಿದ್ದಾರೆ. ಇವರ ಹೇಳಿಕೆಯಿಂದ ಸದನದ ಗೌರವಕ್ಕೆ ಚ್ಯುತಿಯಾಗಿದೆ. ದೇಶಪಾಂಡೆ ಪ್ರಸ್ತಾಪಿಸಿರುವಂತೆ 225 ಜನರ ಮೇಲೂ ಸಿಎಂ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಆತಂಕದಿಂದ ಕೋರ್ಟ್‍ಗೆ ಹೋಗಿರುವುದು ಸಚಿವರು. ಇಂತಹ ಬೇಜವಾಬ್ದಾರಿ ಸಚಿವರನ್ನು ಮುಖ್ಯಮಂತ್ರಿ ಯಾವುದೆ ಕಾರಣಕ್ಕೂ ಸಂಪುಟದಲ್ಲಿ ಇಟ್ಟುಕೊಳ್ಳಬಾರದು. ರಾಜೀನಾಮೆ ಪಡೆದು ಮೊದಲು ಅವರನ್ನು ಸಂಪುಟದಿಂದ ಹೊರಗೆ ಕಳುಹಿಸಿ ಎಂದು ಒತ್ತಾಯಿಸಿದರು.
ಈ ಬಗ್ಗೆ ಸರಕಾರದ ಪರವಾಗಿ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಸದನದ ಹೊರಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆ ಬಗ್ಗೆ ನಿಮಗೆ ಆಕ್ಷೇಪ ಇದ್ದರೆ ಸದನದ ಹೊರಗೆ ಆ ಬಗ್ಗೆ ಪ್ರಶ್ನಿಸಿ. ಸುಧಾಕರ್ ಆ ಹೇಳಿಕೆಯನ್ನು ಯಾವ ಸಂದರ್ಭಕ್ಕೆ ಉದಾಹರಿಸಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದುದರಿಂದ, ಆ ಬಗ್ಗೆ ಸದನದಲ್ಲಿ ಚರ್ಚೆ ಮಾಡಬೇಕಾದ ಅಗತ್ಯ ಇಲ್ಲ. ನಾವೆಲ್ಲ ಸರಿಯಿದ್ದರೆ ಅದರ ಬಗ್ಗೆ ಚಿಂತೆ ಮಾಡಿ, ಗಾಬರಿಯಾಗಬೇಕಾಗಿಲ್ಲ ಎಂದು ಹೇಳಿದರು.
ಬೊಮ್ಮಾಯಿ ಉತ್ತರಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, 225 ಜನ ಶಾಸಕರು ವ್ಯಭಿಚಾರಿಗಳಾ? ಇದು ವ್ಯಭಿಚಾರಿಗಳ ಸರಕಾರವೇ? ಎಂದು ಕಿಡಿಗಾರಿದರು. ಈ ಸಂದರ್ಭದಲ್ಲಿ ಧರಣಿ ನಿರತ ಕಾಂಗ್ರೆಸ್ ಸದಸ್ಯೆ ಲಕ್ಷ್ಮಿಹೆಬ್ಬಾಳ್ಕರ್ ಸ್ಪೀಕರ್ ಪೀಠದ ಬಳಿ ತೆರಳಿ ಮಾತನಾಡಲು ಯತ್ನಿಸಿದರು. ಆಗ ಸ್ಪೀಕರ್ ಪೀಠದ ಬಳಿ ಬರಬಾರದು ಅಲ್ಲಿಂದಲೆ ನಿಮ್ಮ ಮಾತನ್ನು ಹೇಳಿ ಎಂದರು.
"ಈ ಸದನದ ಸದಸ್ಯರ ಬಗ್ಗೆ ಸಂಶಯ, ಅಗೌರವ ಬರುವ ರೀತಿಯಲ್ಲಿ ಯಾರೊಬ್ಬರೂ ಭಾವನೆ ವ್ಯಕ್ತಪಡಿಸಬಾರದು. ನಿಮ್ಮ ನೋವುಗಳಿಗೆ ನಾನು ಜವಾಬ್ದಾರನಾಗುತ್ತೇನೆ. 225 ಸದಸ್ಯರ ಭಾವನೆಗಳಿಗೆ, ಗೌರವವನ್ನು ಎತ್ತಿ ಹಿಡಿಯುವುದು ನನ್ನ ಜವಾಬ್ದಾರಿ. ನಾನು ನಿಮ್ಮ ನೋವುಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ."
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್







