ನಟ ಆಮಿರ್ ಖಾನ್‌ಗೆ ಕೊರೋನ ಸೋಂಕು,ಮನೆಯಲ್ಲೇ ಕ್ವಾರಂಟೈನ್

ಮುಂಬೈ,ಮಾ.24: ಬಾಲಿವುಡ್ ನಟ ಆಮಿರ್ ಖಾನ್(56) ಅವರು ಕೊರೋನವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿರುವ ಅವರು ಕ್ಷೇಮವಾಗಿದ್ದಾರೆ ಎಂದು ಖಾನ್ ಅವರ ವಕ್ತಾರರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಇತ್ತೀಚಿಗೆ ಖಾನ್ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ವಕ್ತಾರರು ಕೋರಿದ್ದಾರೆ.
ನಟರಾದ ರಣಬೀರ್ ಕಪೂರ್ ಮತ್ತು ಕಾರ್ತಿಕ ಆರ್ಯನ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೂ ಇತ್ತೀಚಿಗೆ ಕೊರೋನವೈರಸ್ ಸೋಂಕಿಗೆ ಗುರಿಯಾಗಿದ್ದರು.
ತನ್ಮಧ್ಯೆ ಬುಧವಾರ ಭಾರತದಲ್ಲಿ 47,262 ಹೊಸ ಕೊರೋನವೈರಸ್ ಪ್ರಕರಣಗಳು ವರದಿಯಾಗಿದ್ದು,ಈ ಪೈಕಿ ಸಿಂಹಪಾಲು ಪ್ರಕರಣಗಳು (28,699) ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಭಾರತದಲ್ಲಿ ಒಟ್ಟು ಕೊರೊನ ಪ್ರಕರಣಗಳ ಸಂಖ್ಯೆ 1,17,34,058ಕ್ಕೇರಿದ್ದರೆ 275 ಹೊಸಸಾವುಗಳೊಂದಿಗೆ ಒಟ್ಟು ಸಾವುಗಳ ಸಂಖ್ಯೆ 1,60,441ನ್ನು ತಲುಪಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 25,33,026ಕ್ಕೆ ಏರಿಕೆಯಾಗಿದ್ದು,ಹೊಸದಾಗಿ 132 ಸಾವುಗಳು ವರದಿಯಾಗುವುದರೊಂದಿಗೆ ಒಟ್ಟು ಸಾವುಗಳ ಸಂಖ್ಯೆ 53,589ನ್ನು ತಲುಪಿದೆ.
ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯು ಸಾರ್ವಜನಿಕ ಮತ್ತು ಖಾಸಗಿ ಹೋಳಿ ಆಚರಣೆಯನ್ನು ನಿಷೇಧಿಸಿದೆ.







