ಉಡುಪಿ : ಎಂಐಟಿಯಲ್ಲಿ 31 ಸೇರಿ ಒಟ್ಟು 79 ಕೊರೋನ ಪಾಸಿಟಿವ್
ಉಡುಪಿ, ಮಾ.24: ಮಣಿಪಾಲದ ಎಂಐಟಿಯಲ್ಲಿ 31 ಹಾಗೂ ಮಣಿಪಾಲದ ಆಸುಪಾಸು 11 ಪ್ರಕರಣಗಳು ಸೇರಿದಂತೆ ಬುಧವಾರ ಜಿಲ್ಲೆಯಲ್ಲಿ ಒಟ್ಟು 79 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 35 ಮಂದಿ ರೋಗದಿಂದ ಗುಣಮುಖರಾದರೆ, ಒಟ್ಟು 468 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 79 ಮಂದಿಯಲ್ಲಿ 65 ಮಂದಿ ಉಡುಪಿ ತಾಲೂಕಿನವರಾಗಿದ್ದಾರೆ. ಇವರಲ್ಲಿ 31 ಮಂದಿ ಕಂಟೈನಮೆಂಟ್ ವಲಯವಾಗಿರುವ ಎಂಐಟಿ ಕ್ಯಾಂಪಸ್‌ನ ವಿದ್ಯಾರ್ಥಿಗಳಾದರೆ, 11 ಮಂದಿ ಮಣಿಪಾಲ ಇತರ ಕಡೆಯವರು ಸೇರಿದ್ದಾರೆ. ಉಳಿದಂತೆ 9 ಮಂದಿ ಕುಂದಾಪುರ ತಾಲೂಕಿನವರಾದರೆ, ಐವರು ಕಾರ್ಕಳ ತಾಲೂಕಿ ನವರು ಎಂದು ಡಾ.ಸೂಡ ವಿವರಿಸಿದರು.
ಕೋವಿಡ್ ಎರಡನೇ ಅಲೆ ಈಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿರುವ ಸೂಚನೆಗಳಿವೆ. ಇಂದು ಪಾಸಿಟಿವ್ ಬಂದವರಲ್ಲಿ ಕಾಪು ಆಸುಪಾಸಿನ 9 ಮಂದಿಯೂ ಸೇರಿದ್ದಾರೆ. ಅದೇ ರೀತಿ ಕುಂದಾಪುರ ಮತ್ತು ಕಾರ್ಕಳದ ಗ್ರಾಮೀಣ ಪ್ರದೇಶಗಳ ಜನರಲ್ಲೂ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಅವರು ಹೇಳಿದರು.
ಬುಧವಾರ ಪಾಸಿಟಿವ್ ಕಂಡುಬಂದವರಲ್ಲಿ 48 ಮಂದಿ ಪುರುಷರು ಹಾಗೂ 31 ಮಂದಿ ಮಹಿಳೆಯರು. ಇಂದು 35 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 23,777ಕ್ಕೇರಿದೆ.
ಮಂಗಳವಾರ 2324 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 79 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 24,435 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,01,960 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ಗೆ ಯಾರೂ ಬಲಿ ಯಾಗಿಲ್ಲ. ಈವರೆಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 190 ಆಗಿದೆ.







