ಪರಂಪರಾಗತ ಪೌಷ್ಟಿಕ ಆಹಾರಗಳಿಗೆ ಒತ್ತು ನೀಡಿ : ಲಾಲಾಜಿ
ಉಡುಪಿ, ಮಾ.24: ಪರಂಪರಾಗತ ಪೌಷ್ಠಿಕ ಆಹಾರಗಳಿಗೆ ಹೆಚ್ಚು ಒತ್ತನ್ನು ನೀಡಿ, ಆರೋಗ್ಯಯುತ ಉತ್ತಮ ಹಾಗೂ ಬಲಿಷ್ಠ ಸಮಾಜ ನಿರ್ಮಿಸುವಂತೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಸಲಹೆ ನೀಡಿದ್ದಾರೆ.
ಬುಧವಾರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಉಡುಪಿ, ತಾಲೂಕು ಪಂಚಾಯತ್ ಕಾಪು, ಬಡಾ ಗ್ರಾಮ ಪಂಚಾಯತ್ ಹಾಗೂ ಸರಸ್ವತಿ ಶಾಲೆ ಉಚ್ಚಿಲ ಇವರ ಸಹಯೋಗದೊಂದಿಗೆ, ಪೋಷಣ್ ಅಭಿಯಾನ್ ಯೋಜನೆಯ ಪೋಷಣ್ ಪಕ್ವಾಡ-2021ರಲ್ಲಿ ಪೋಷಣ್ ಪಂಚಸೂತ್ರಗಳು-ವಿಶೇಷ ಆರೋಗ್ಯ ತಪಾಸಣೆ ಹಾಗೂ ಉತ್ತಮ ಆರೋಗ್ಯ ಕ್ಕಾಗಿ ಪರಂಪರಾಗತ ಉತ್ತಮ ಆಹಾರ ಪದ್ಧತಿಗಳ ಕುರಿತು ನಡೆದ ಜಾಗೃತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮ ದಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿ ಮಾತನಾಡಿದರು.
ಕೊರೋನ ಮಹಾಮಾರಿಯ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ವೈಯುಕ್ತಿಕ ಸ್ವಚ್ಛತೆ ಕುರಿತು ಕಾಳಜಿ ವಹಿಸುವಂತೆ ತಿಳಿಸಿದರು. ಬಡಾ ಗ್ರಾಪಂ ಅಧ್ಯಕ್ಷೆ ಜ್ಯೋತಿ ಗಣೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಪಂ ಸದಸ್ಯೆ ಶಿಲ್ಪಾಜಿ ಸುವರ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ, ಪೋಷಣ್ ಅಭಿಯಾನ- ಪೋಷಣ್ ಪಕ್ವಾಡ-2021 ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಆರೋಗ್ಯ ನಿರೀಕ್ಷಕ ದೇವಪ್ಪ ಪಟಗಾರ್, ತಾಪಂ ಉಪಾಧ್ಯಕ್ಷ ಯು.ಸಿ. ಶೇಕಬ್ಬ, ಬಡಾ ಗ್ರಾಪಂ ಉಪಾಧ್ಯಕ್ಷೆ ಶಕುಂತಲ ಕೋಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕುಶಾಲಿನಿ ವಿ.ಎಸ್, ಸರಸ್ವತಿ ಶಾಲೆಯ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಮೇಲ್ವಿಚಾರಕಿಯರು ಉಪಸ್ಥಿತರಿದ್ದರು.
ಗ್ರಾಪಂ ಕಾರ್ಯದರ್ಶಿ ನಿರ್ಮಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಪೌಷ್ಠಿಕ ಆಹಾರಗಳ ಪ್ರಾತ್ಯಕ್ಷತೆ ಹಾಗೂ ಮಹಿಳೆಯರಿಗಾಗಿ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ರಕ್ತಹೀನತೆ ಪರೀಕ್ಷೆ ನಡೆಸಲಾಯಿತು.







