ಕಾರು ಚಲಾಯಿಸಿ ರಿಕ್ಷಾ ಚಾಲಕನ ಸಾವು ಪ್ರಕರಣ: ಆರೋಪಿಗೆ ಮೂರು ವರ್ಷ ಜೈಲು ಶಿಕ್ಷೆ
ಮಂಗಳೂರು, ಮಾ.24: ಮದ್ಯ ಸೇವಿಸಿ ಕಾರು ಚಲಾಯಿಸಿ ರಿಕ್ಷಾ ಚಾಲಕನೋರ್ವರ ಸಾವಿಗೆ ಕಾರಣನಾದ ಕಾರು ಚಾಲಕನಿಗೆ ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.
ಬಿಕರ್ನಕಟ್ಟೆಯ ಅನೀಶ್ ಜಾನ್ ಶಿಕ್ಷೆಗೊಳಗಾದ ಆರೋಪಿ.
ಪ್ರಕರಣ ವಿವರ: 2017ರ ಆಗಸ್ಟ್ 6ರಂದು ರಾತ್ರಿ 10:45ರ ವೇಳೆಗೆ ಅನೀಶ್ ಜಾನ್ ನಗರದ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ. ಈತ ಜ್ಯೋತಿ ಸರ್ಕಲ್(ಅಂಬೇಡ್ಕರ್ ವೃತ್ತ) ಸಮೀಪ ಆಟೋರಿಕ್ಷಾ ನಿಲ್ದಾಣದಲ್ಲಿ ನಿಂತಿದ್ದ ರಿಕ್ಷಾ ಚಾಲಕ ಪ್ರವೀಣ್ ಎಂ.ಎ., ಅಶೋಕ್ ಪಾಸ್ಕಲ್ ಡಿಸೋಜ ಮತ್ತು ಜಗದೀಶ್ ಅವರಿಗೆ ಕಾರು ಢಿಕ್ಕಿ ಹೊಡೆಸಿದ್ದ. ಪರಿಣಾಮ ಪ್ರವೀಣ್ ಮೃತಪಟ್ಟಿದ್ದರು. ಉಳಿದ ಇಬ್ಬರು ಗಾಯಗೊಂಡಿದ್ದರು. ಈ ಬಗ್ಗೆ ಪೊಲೀಸರು ಬಂದರ್ ಠಾಣೆಯಲ್ಲಿ ‘ಕೊಲೆಯಲ್ಲದ ಮಾನವ ಹತ್ಯೆ’ ಪ್ರಕರಣ ದಾಖಲಿಸಿಕೊಂಡಿದ್ದರು. ಚಾಲಕನು ಮದ್ಯ ಸೇವನೆ ಮಾಡಿದ್ದ ಎನ್ನವುದು ಕೂಡ ದೂರಿನಲ್ಲಿ ಉಲ್ಲೇಖಗೊಂಡಿತ್ತು.
ಬಂದರು ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಶಾಂತಾರಾಮ್ ಮತ್ತು ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ಪಿ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಲೀಧರ ಪೈ ಬಿ. ಶಿಕ್ಷೆ ಪ್ರಕಟಿಸಿದ್ದಾರೆ.
ಆರೋಪಿ ಮದ್ಯ ಸೇವಿಸಿ ವಾಹನ ಚಲಾಯಿಸಿರುವುದಕ್ಕೆ 1 ವರ್ಷ ಸಾದಾ ಸಜೆ ಹಾಗೂ 1,000 ರೂ. ದಂಡ ಹಾಗೂ ಕೊಲೆಯಲ್ಲದ ಮಾನವ ಹತ್ಯೆ ನಡೆಸಿರುವುದಕ್ಕೆ 3 ವರ್ಷ ಸಾದಾ ಸಜೆ ಮತ್ತು 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಮತ್ತೆ 1 ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ, ಸಂತ್ರಸ್ತರ ಕಡೆಯವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.
ಪ್ರಾಸಿಕೂಷನ್ ಪರವಾಗಿ ಈ ಹಿಂದಿನ ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ಹಾಗೂ ಪ್ರಸ್ತುತ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದ ಮಂಡಿಸಿದ್ದರು.







